ಮಡಿಕೇರಿ ಮಾ.16 : ಶನಿವಾರಸಂತೆ- ಕೊಡಗು ಹಾಸನ ಜಿಲ್ಲಾ ಗಡಿಭಾಗದಲ್ಲಿರುವ ಕೊಡಗು ಜಿಲ್ಲೆಗೆ ದಿನನಿತ್ಯದ ಒಡನಾಟ ಹೊಂದಿರುವ ಸಕಲೇಶಪುರ ತಾಲೂಕಿಗೆ ಸೇರಿದ ಈಚಲಬೀಡು ಗ್ರಾಮದಲ್ಲಿ ಮಾ.19ರಂದು ಸಕಲೇಶಪುರ ತಾಲೂಕು ಮಟ್ಟದ ಮಲೆನಾಡು ಜಾನಪದ ಉತ್ಸವ ನಡೆಯಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಸಕಲೇಶಪುರ ತಾಲೂಕು ಘಟಕದ ಅಧ್ಯಕ್ಷ ದೊಡ್ಡ ಮನೆ ಆನಂದ್ ಹೇಳಿದರು.
ಶನಿವಾರಸಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜಾನಪದ ಸೊಗಡು ದೇಶಿಯ ಸಂಸ್ಕೃತಿಯಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ತಾಲೂಕು ಜಿಲ್ಲಾ ರಾಜ್ಯ ಮಟ್ಟದ ಜಾನಪದ ಉತ್ಸವಗಳನ್ನು ನಡೆಸಲಾಗುತ್ತಿದೆ. ಈ ದಿಶೆಯಲ್ಲಿ ಸಕಲೇಶಪುರ ತಾಲೂಕು ಘಟಕದ ವತಿಯಿಂದ ಮಾ.19ರಂದು ಕೊಡಗು ಹಾಸನ ಗಡಿ ಭಾಗದಲ್ಲಿರುವ ಈಚಲಬೀಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಮಲೆನಾಡು ಜಾನಪದ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಲೆನಾಡು ಜಾನಪದ ಉತ್ಸವ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ ಜಿಲ್ಲೆ ಅಕ್ಕಪಕ್ಕದ ಜಿಲ್ಲೆಯ ಕಡೆಗಳಿಂದಲೂ ಜಾನಪದ ಉತ್ಸವದಲ್ಲಿ ಜನರು ಪಾಲ್ಗೊಳ್ಳಲಿದ್ದು ಉತ್ಸವದಲ್ಲಿ ಸುಗ್ಗಿ ಕುಣಿತ, ಕುಣಿ ಮಿನಿ ವಾದ್ಯ, ಉಮ್ಮತ್ ತಾಟ್, ಡೊಳ್ಳು ಕುಣಿತ ಕಂಸಾಳೆ ನೃತ್ಯ ಕೋಲಾಟ ತಂಬೂರಿ ಪದ, ಚಿಟ್ಟಿ ಮೇಳ, ಕರಗ ನೃತ್ಯ ಸೋಮನ ಕುಣಿತ ವೀರಗಾಸೆ ಲಂಬಾಣಿ ನೃತ್ಯ, ಗೀಗಿ ಪದ, ರಾಗಿ ಬೀಸುವ ಪದ ಮುಂತಾದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಜಾನಪದ ಉತ್ಸವದಲ್ಲಿ ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಗೌರವ ಸಲಹೆಗಾರ ಕಳಲೇ ಕೃಷ್ಣೇಗೌಡ ಮಾತನಾಡಿ ಮಾ.19ರಂದು ಬೆಳಿಗ್ಗೆ 9.30 ಗಂಟೆಗೆ ನಡೆಯಲಿರುವ ಮಲೆನಾಡು ಜಾನಪದ ಉತ್ಸವದ ಮೆರವಣಿಗೆಯನ್ನು ಸಕಲೇಶಪುರ ಶಾಸಕ ಎಂ.ಕಿ ಕುಮಾರಸ್ವಾಮಿ ಉದ್ಘಾಟನೆಸಲ್ಲಿದ್ದು, ಬೆಳಗ್ಗೆ 11 ಗಂಟೆಗೆ ಉತ್ಸವದ ಸಮಾರಂಭದಲ್ಲಿ ಆದಿಚುಂಚನಗಿರಿ ಹಾಸನ ಶಾಖ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶನಿವಾರಸಂತೆ ಶ್ರೀ ಕ್ಷೇತ್ರ ಮನೆ ಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಇವರುಗಳು ದಿವ್ಯ ಸಾನಿಧ್ಯ ವಹಿಸಲಿದ್ದು ಸಮಾರಂಭದಲ್ಲಿ ಕರ್ನಾಟಕ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ರಾಮಚಂದ್ರಗೌಡ, ಸೇರಿದಂತೆ ಜಿಲ್ಲೆ ಹೊರ ಜಿಲ್ಲೆಯ ವಿವಿಧ ಕಡೆಗಳಿಂದ ಗಣ್ಯರು ಆಗಮಿಸಲಿದ್ದು ಮಲೆನಾಡು ಜಾನಪದ ಉತ್ಸವವನ್ನು ಯಶಸ್ವಿಗೊಳಿಸಲು ಕೊಡಗು ಜಿಲ್ಲೆಯ ಜನರು ಸಹ ಸಹಕರಿಸುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಾನಪದ ಪರಿಷತ್ತಿನ ಪ್ರಮುಖರಾದ ಎಚ್. ಕೆ ದಿನೇಶ್, ಹೆಚ್.ಬಿ. ರಾಮೇಗೌಡ ಹಾಜರಿದ್ದರು.
ವರದಿಃ ದಿನೇಶ್ ಮಾಲಂಬಿ( ಶನಿವಾರಸಂತೆ)