ಶನಿವಾರಸಂತೆ ಮಾ.16 : ಅಂಗಡಿಗಳಿಗೆ ಹೊರಗಡೆಯಿಂದ ಸರಕು ಸಾಮಾನುಗಳನ್ನು ತರುವ ವಾಹನಗಳಿಗೆ ಸುಂಕ ವಸೂಲಾತಿ ಮಾಡದಂತೆ ಕೊಡ್ಲಿಪೇಟೆ ವರ್ತಕರ ಸಂಘ ಮನವಿ ಮಾಡಿದೆ.
ವರ್ತಕರ ಸಂಘದ ಅಧ್ಯಕ್ಷ ಎಚ್.ಸಿ.ಯತೀಶ್ಕುಮಾರ್ ನೇತೃತ್ವದಲ್ಲಿ ಕೊಡ್ಲಿಪೇಟೆ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಹೂವಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು, ಕೊಡ್ಲಿಪೇಟೆ ಪಟ್ಟಣದಲ್ಲಿ ಅಂಗಡಿಗಳಿಗೆ ಸರಕು ಸಾಮಾಗ್ರಿಗಳನ್ನು ತರುತ್ತಿರುವ ವಾಹನಗಳಿಗೆ ದುಬಾರಿ ಶುಲ್ಕ ವಸೂಲಾತಿ ಮಾಡುತ್ತಿದ್ದು, ಇದರಿಂದ ಅಂಗಡಿಗಳಿಗೆ ಸಾಮಾಗ್ರಿ ಸರಬರಾಜು ಮಾಡುವ ವಾಹನಗಳು ಬರುತ್ತಿಲ್ಲ ಹಾಗೂ ಹೊಟೇಲ್ , ಇತರೆ ಅಂಗಡಿಗಳಿಗೆ ಭೇಟಿ ನೀಡುವ ಟೂರಿಸ್ಟ್ ವಾಹನಗಳಿಗೂ ಸಹ ಸುಂಕ ವಿಧಿಸುತ್ತಿರುವುದರಿಂದ ವಾಹನಗಳು ಬರುತ್ತಿಲ್ಲ. ಈ ಕಾರಣದಿಂದ ವರ್ತಕರಿಗೆ ವ್ಯಾಪಾರ ವ್ಯವಹಾರ ಮಾಡಲು ಕಷ್ಟವಾಗುತ್ತಿದೆ ಎಂದು ವರ್ತಕರು ಬೇಸರ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಗ್ರಾ.ಪಂ.ಯವರು ಅಂಗಡಿಗಳಿಗೆ ಸರಕು ಸಾಮಾಗ್ರಿ ಸರಬರಾಜು ಮಾಡುವ ವಾಹನಗಳಿಗೆ ಮತ್ತು ಟೂರಿಸ್ಟ್ ವಾಹನಗಳಿಗೆ ಸುಂಕವನ್ನು ವಿಧಿಸದೆ ವರ್ತಕರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭ ವರ್ತಕರ ಸಂಘದ ಪ್ರಮುಖರಾದ ಎಚ್.ಎಂ.ದಿವಾಕರ್, ಬಿ.ಕೆ.ಯತೀಶ್, ಕುಮಾರ್, ರಮೇಶ್ ಹಾಜರಿದ್ದರು.
ವರದಿಃ ದಿನೇಶ್ ಮಾಲಂಬಿ (ಶನಿವಾರಸಂತೆ)