ಮಡಿಕೇರಿ ಮಾ.17 : ಶತಶತಮಾನಗಳ ಇತಿಹಾಸವಿರುವ ಹಾಗೂ ಉದ್ಭವ ಶಿವಲಿಂಗವೆಂಬ ಖ್ಯಾತಿ ಹೊಂದಿರುವ ಪೊನ್ನಂಪೇಟೆ ತಾಲ್ಲೂಕಿನ ಕುಂದಾ ಮುಗುಟಿಗೇರಿ ಗ್ರಾಮದಲ್ಲಿರುವ “ಬೊಟ್ಟಿಯತ್ ನಾಡ್” ಈಶ್ವರ ದೇವಾಲಯದ (ನಾಡ್ ದೇವಸ್ಥಾನ) ವಾರ್ಷಿಕೋತ್ಸವವು ಅವಭೃತ ಸ್ನಾನದೊಂದಿಗೆ (ದೇವ ಕುಳಿಪೋ) ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಕುಂದಾ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಈಶ್ವರ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಈ ಭಾಗದ ಆರು ಗ್ರಾಮಗಳಾದ ಮುಗುಟಿಗೇರಿ, ಕುಂದಾ, ಈಚೂರ್, ಹುದೂರ್, ಹಳ್ಳಿಗಟ್ಟ್ ಹಾಗೂ ಅರ್ವತೋಕ್ಲು ಗ್ರಾಮಗಳಿಗೆ ಸೇರಿರುವ ನಾಡ್ ದೇವಸ್ಥಾನ ಇದಾಗಿದೆ. ಬೊಟ್ಟಿಯತ್ ನಾಡ್ ಈಶ್ವರ ದೇವಸ್ಥಾನವೆಂದು ಖ್ಯಾತಿ ಪಡೆದಿರುವ ಈ ದೇವಾಲಯದಲ್ಲಿ ನಿತ್ಯ ಪೂಜೆಯ ಜೊತೆಗೆ, ವಿವಿಧ ಪೂಜಾ ಕೈಂಕರ್ಯಗಳು ಪ್ರತಿನಿತ್ಯ ನಡೆಯುತ್ತದೆ.
ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ವಾರ್ಷಿಕ ಹಬ್ಬ ನಡೆಯಲಿದ್ದು, ಈ ಬಾರಿ ಕೊಡಿಮರೆ ನಿಲ್ಲಿಸುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಉತ್ಸವದ ಪ್ರತಿನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ನಿರಂತರ ಅನ್ನಸಂತರ್ಪಣೆ ಕಾರ್ಯಕ್ರಮದೊಂದಿಗೆ ಹರಕೆ ಬೊಳಕ್, ಅಲಂಕಾರ ಪೂಜೆ ಸೇರಿದಂತೆ 9ದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು ನಡೆಯಿತು.
ಪಡುವೇರಿ ದಬ್ಬೇಚಮ್ಮ (ಪಾರ್ವತಿ) ದೇವಸ್ಥಾನಕ್ಕೆ ನಾಡಿನವರು ಸೇರಿ ಈಶ್ವರ ದೇವರ ಆಭರಣಗಳನ್ನು ತಂದು ಪಾರ್ವತಿಗೆ ತೊಡಿಸಿ ಅಲಂಕಾರ ಪೂಜೆ ಮಾಡುವ ಮೂಲಕ ವಿವಿಧ ಪೂಜಾ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು. ಸಂಜೆ ಈಶ್ವರ ದೇವಸ್ಥಾನದ ಹತ್ತಿರದ ದೇವರ ಕೆರೆಗೆ ಅವಭೃತ ಸ್ನಾನಕ್ಕೆ ಸಾಂಪ್ರದಾಯಿಕ ವಾಲಗದೊಂದಿಗೆ ತೆರಳಿ ಉತ್ಸವ ಮೂರ್ತಿಯನ್ನು ಶೃಂಗರಿಸಿ ಹೊತ್ತುತಂದು ದೇವಸ್ಥಾನದ ಒಂಬತ್ತು ಸುತ್ತು ಚೆಂಡೆ ಹಾಗೂ ವಾಲಗದೊಂದಿಗೆ ಹೆಜ್ಜೆ ಹಾಕಲಾಯಿತು.
ಬಳಿಕ ದೇವಸ್ಥಾನದೊಳಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಸಾಮೂಹಿಕ ಭೋಜನದೊಂದಿಗೆ ಒಂಬತ್ತು ದಿನಗಳ ಹಬ್ಬಕ್ಕೆ ಸಂಪ್ರದಾಯಿಕ ತೆರೆ ಎಳೆಯಲಾಯಿತು.
ಈ ಸಂದರ್ಭ ನಾಡ್ ತುಕ್ಕು ಸೇರಿದಂತೆ ಆರು ಗ್ರಾಮಗಳ ತಕ್ಕಮುಖ್ಯಸ್ಥರು, ದೇವ ತಕ್ಕ, ಭಂಡಾರ ತಕ್ಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.