ಮಡಿಕೇರಿ ಮಾ.17 : ಗೋಸಂರಕ್ಷಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮ ವ್ಯಾಪ್ತಿಗಳಲ್ಲಿನ ಗೋಮಾಳಗಳಿಗೆ ಆಯಾ ವ್ಯಾಪ್ತಿಯಲ್ಲಿನ ಗೋಶಾಲೆಗಳಿಂದ ಬೇಲಿ ಹಾಕಿ, ಜಾನುವಾರುಗಳ ಸಂರಕ್ಷಣೆಗೆ ರಾಜ್ಯ ವ್ಯಾಪಿ ಕಾರ್ಯಕ್ರಮ ರೂಪಿಸಲಾಗುವುದೆಂದು ಕುಶಾಲನಗರ ಬಳಿಯ ಚಿಕ್ಕತ್ತೂರು ಗ್ರಾಮದ ಶ್ರೀಕೃಷ್ಣ ಗೋ ಶಾಲೆಯ ಅಧ್ಯಕ್ಷರು ಹಾಗೂ ಪ್ರಾಣಿ ದಯಾ ಸಂಘದ ಸದಸ್ಯ ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಮಾಳಗಳನ್ನು ಯಾವುದೇ ಸಂಘ-ಸಂಸ್ಥೆಗಳು, ಟ್ರಸ್ಟ್‍ಗಳಿಗೆ ಕಾನೂನೂ ಬದ್ಧವಾಗಿ ನೀಡಲು ಬರುವುದಿಲ್ಲವೆಂದು ಸರ್ಕಾರ ತಿಳಿಸುತ್ತದೆ. ಆದರೆ, ಇದೇ ಗೋಮಾಳಗಳನ್ನು ಅತಿಕ್ರಮಿಸಿಕೊಂಡು ಸಾಕಷ್ಟು ಮಂದಿ ಮನೆಗಳನ್ನು ನಿರ್ಮಿಸಿದ ಪ್ರಕರಣಗಳಿವೆ. ಅವರನ್ನು ತೆರವು ಮಾಡಬೇಕೆಂದು ನಾವು ಹೇಳುತ್ತಿಲ್ಲ. ಆದರೆ, ಆ ಸಂದರ್ಭ ಮೌನವಾಗಿದ್ದ ಸರ್ಕಾರ ಗೋವುಗಳಿಗೆ ಅನುಕೂಲ ಮಾಡಿಕೊಡುವ ಗೋಶಾಲೆಗಳಿಗೆ ಗೋಮಾಳವನ್ನು ಒದಗಿಸಲು ಯಾಕೆ ಮುಂದಾಗುತ್ತಿಲ್ಲವೆಂದು ಪ್ರಶ್ನಿಸಿದರು.
ಗೋಮಾಳಗಳಲ್ಲಿ ರೆಸಾರ್ಟ್, ಕಟ್ಟಡ ನಿರ್ಮಾಣ, ಕೃಷಿ ನಡೆಸುವುದಿಲ್ಲ ಮೊದಲಾದ ನಿರ್ಬಂಧಗಳನ್ನು ವಿಧಿಸಿ ಗೋಶಾಲೆಗಳಿಗೆ ಅದನ್ನು ಒದಗಿಸಿದಲ್ಲಿ ಗೋವುಗಳ ಸಂರಕ್ಷಣೆ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕಾಲ ಕ್ರಮೇಣ ಇರುವ ಗೋಮಾಳಗಳು ಅತಿಕ್ರಮಣಕ್ಕೆ ಒಳಗಾಗಿ ಗೋಮಾಳಗಳೇ ಕಾಣದಂತಹ ಪರಿಸ್ಥಿತಿ ಎದುರಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.
ಪುಣ್ಯಕೋಟಿ ದತ್ತು ಯೋಜನೆ ಹಣ ಒದಗಿಸಿ- ರಾಜ್ಯ ಸರ್ಕಾರ ಪುಣ್ಯಕೊಟಿ ದತ್ತು ಯೋಜನೆಯಡಿ ಸರ್ಕಾರಿ ಅಧಿಕಾರಿಗಳಿಂದ 11 ಸಾವಿರ ರೂ.ಗಳನ್ನು ಗೋ ಸಂರಕ್ಷಣಾ ಕಾರ್ಯಕ್ಕೆ ಸಂಗ್ರಹಿಸಿದೆ. ಆದರೆ, ಇಲ್ಲಿಯವರೆಗೂ ಆ ಹಣವನ್ನು ಗೋಶಾಲೆಗಳಿಗೆ ಒದಗಿಸಿಲ್ಲವೆಂದು ಬೇಸರ ವ್ಯಕ್ತಪಡಿಸಿ, ಸಂಗ್ರಹವಾದ ಹಣವನ್ನು ಮೂರು ಕಂತಿನಲ್ಲಿ ಸರ್ಕಾರ ಒದಗಿಸುತ್ತದೆ ಎನ್ನುವ ಮಾಹಿತಿ ಇದೆ. ಆದರೆ, ಹಣವನ್ನು ಒಂದೇ ಕಂತಿನಲ್ಲಿ ನೀಡಬೇಕೆಂದು ಮನವಿ ಮಾಡಿದರು.
::: ಗೋಮಾಳ ಪೂರ್ಣ ಬಳಕೆಯಾಗಲಿ :::
ಮಡಿಕೇರಿಯ ಕೆ. ನಿಡುಗಣೆಯಲ್ಲಿ ಇರುವ 24.5 ಏಕರೆ ಗೋಮಾಳದಲ್ಲಿ 8 ಏಕರೆ ಜಾಗದಲ್ಲಿ ಸರ್ಕಾರ ಗೋ ಶಾಲೆಯನ್ನು ನಿರ್ಮಿಸಿದೆ. ಇದರಲ್ಲಿ 50 ಗೋವಿಗಳಿಗೆ ಶೆಡ್ಡ್, ಹುಲ್ಲು ಶೇಖರಿಸಿಡಲು ಗೋದಾಮಿನ ವ್ಯವಸ್ಥೆ ಮಾಡಲಾಗಿದೆ. ಒಬ್ಬ ರೈತನಿಂದ ಒಂದು ಗೋವನ್ನು ಪಡೆದುಕೊಂಡಿದ್ದಾರೆ ಎಂದು ಭಾವಿಸಿದರು ಕೇವಲ 50 ರೈತರಿಂದ ಗೋವುಗಳನ್ನು ಇಲ್ಲಿ ಪಡೆಯಬಹುದಾಗಿದೆಯಷ್ಟೆ. ಈ ಹಿನ್ನೆಲೆ ಲಭ್ಯವಿರುವ ಗೋಮಾಳದ ಎಲ್ಲಾ ಜಾಗವನ್ನು ಬಳಸಿಕೊಂಡು ಕನಿಷ್ಟ 200 ಗೋವುಗಳಿಗೆ ಆಶ್ರಯ ನೀಡುವುದು ಅಗತ್ಯವೆಂದು ಹರೀಶ್ ಆಚಾರ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಕೃಷ್ಣ ಗೋಶಾಲೆಯ ಸದಸ್ಯರಾದ ಚೌರೀರ ರಮೇಶ್, ಚೆಟ್ಟಿಮಾಡ ಲೋಕೇಶ್, ರವಿ ಗುರುಸ್ವಾಮಿ, ಪೋರನ ರಾಘವೇಂದ್ರ ಹಾಗೂ ಸೋಮನಾಥ್ ಉಪಸ್ಥಿತರಿದ್ದರು.









