ವಿರಾಜಪೇಟೆ ಮಾ.17 : ಕರ್ನಾಟಕ ಸರಕಾರದ ವತಿಯಿಂದ ನೀಡಲಾಗುವ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಪೂಮಾಲೆ ಪತ್ರಿಕೆ ಸಂಪಾದಕರು, ವಿರಾಜಪೇಟೆ ತಾಲೂಕು ಜಾನಪದ ಪರಿಷತ್ತಿನ ಗೌರವ ಅದ್ಯಕ್ಷರು ಆಗಿರುವ ಅಜ್ಜೀನಿಕಂಡ ಮಹೇಶ್ ನಾಚಯ್ಯ ಅವರನ್ನು ವಿರಾಜಪೇಟೆ ಜಾನಪದ ಪರಿಷತ್ತಿನ ವತಿಯಿಂದ ಅವರ ನಿವಾಸಕ್ಕೆ ತೆರಳಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇವರಿಗೆ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು, 27 ವರ್ಷಗಳ ನನ್ನ ಪತ್ರಿಕೋದ್ಯಮದಲ್ಲಿ “ಕಾಯಕವೇ ಕೈಲಾಸ’ ಎಂಬಂತೆ ಬಂದ ನನ್ನ ಹಾದಿಯಲ್ಲಿ ಕಲ್ಲು ಮುಳ್ಳುಗಳನ್ನು ಹಲವು ಬಾರಿ ಮೆಟ್ಟಿದ್ದರೂ ಧೃತಿಗೆಡದೆ ಮುನ್ನುಗ್ಗಿದ್ದೇನೆ. ಇಂದಿಗೂ ನಾನಾಗಿ ಯಾವುದೇ ಪ್ರಶಸ್ತಿ, ಸನ್ಮಾನಗಳ ಹಿಂದೆ ಬಿದ್ದಿಲ್ಲ. ನನಗಾಗಿ ಒಲಿದು ಬಂದವು ಒಂದಿಷ್ಟು. ಇದರಲ್ಲಿ ಪ್ರತಿಷ್ಟಿತ ಮಾಧ್ಯಮ ಅಕಾಡೆಮಿಯ ರಾಜ್ಯ ಪ್ರಶಸ್ತಿಯು ದೊರಕಿರುವುದು ನನ್ನಲ್ಲಿ ಸಾರ್ಥಕತೆ ತಂದಿದೆ. ಕುಟುಂಬವೆಂಬಂತೆ ಆತ್ಮೀಯತೆಯ ನಂಟನ್ನು ಹೊತ್ತಿರುವ ನಮ್ಮ ಜಾನಪದ ಮನಸ್ಸುಗಳು, ಅದರಲ್ಲೂ ವೀರಾಜಪೇಟೆ ತಾಲೂಕು ಜಾನಪದ ಪರಿಷತ್ ಘಟಕದ ಪದಾಧಿಕಾರಿಗಳು ಅಚ್ಚರಿಯೆಂಬಂತೆ ಮನೆಗೆ ಬಂದು ನನ್ನನ್ನು ಸನ್ಮಾನಿಸಿರುವುದು ಅತೀವ ಸಂತೋಷವೆನಿಸಿದೆ. ಸಾರ್ಥಕತೆಯ ಭಾವ ಮೂಡಿದೆ ಎಂದು ಹೇಳಿದರು.
ಸನ್ಮಾನ ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲೂಕು ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಜೀತ ಕಾರ್ಯಪ್ಪ, ಖಜಾಂಚಿ ದೇರಪಂಡ ದ್ರುವ, ಸಂಘಟನಾ ಕಾರ್ಯದರ್ಶಿ ವಿಮಲ ದಶರಥ, ಉಪಾಧ್ಯಕ್ಷರಾದ ಚಂಬಂಡ ಮುದ್ದಪ್ಪ, ನಿರ್ದೇಶಕರಾದ ಟಿ.ಡಿ.ಮೋಹನ್ ಹಾಗೂ ದಿಲಿ ಕುಮಾರ್, ಪ್ರಮೀಳಾ ನಾಚಯ್ಯ ಪಾಲ್ಗೊಂಡಿದ್ದರು.









