ನಾಪೋಕ್ಲು ಮಾ.18 : ಜಿಲ್ಲೆಯಲ್ಲಿ ಮತ್ತೆ ಹಾಕಿ ಹಬ್ಬದ ಸಂಭ್ರಮ ಮರುಕಳಿಸುತ್ತಿದ್ದು, ಇಂದಿನಿಂದ ಆರಂಭಗೊಳ್ಳುವ 23ನೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಕ್ಷಣಗಣನೆ ಪ್ರಾರಂಭವಾಗಿದೆ.
ಇಲ್ಲಿನ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಂತಿಮ ಹಂತದ ಸಿದ್ದತೆಗಳು ಪೂರ್ಣಗೊಂಡಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಕಿ ಪಂದ್ಯಾವಳಿಗೆ ಉದ್ಘಾಟನೆಗೆ ಆಗಮಿಸಲಿದ್ದು, ಉತ್ಸವದ ಮೆರುಗು ಮತ್ತಷ್ಟು ಹೆಚ್ಚಲಿದೆ. ಅಪ್ಪಚೆಟ್ಟೋಳಂಡ ಕುಟುಂಬ ಕೌಟುಂಬಿಕ ಹಾಕಿ ಉತ್ಸವದ ಆತಿಥ್ಯ ವಹಿಸಿದ್ದು ಶುಕ್ರವಾರ ಅಂತಿಮ ಹಂತದ ಸಿದ್ಧತೆ ನಡೆಸಿತು.
ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗಾಗಿ ಕ್ರೀಡಾಂಗಣದಲ್ಲಿ ತಯಾರಿ ನಡೆದಿದ್ದು, ಕೊಡಗಿನ ಹಾಕಿ ಪ್ರಿಯರು ವೀಕ್ಷಿಸಲು ಎಲ್ಲ ಸೌಲಭ್ಯಗಳನ್ನು ಒಳಗೊಂಡ 32 ಲಕ್ಷ ರೂ.ವೆಚ್ಚದ ಬೃಹತ್ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. 25000 ಜನರು ಒಟ್ಟಾಗಿ ಪಂದ್ಯ ವೀಕ್ಷಿಸಬಹುದಾಗಿದೆ. ಅಲ್ಲದೇ 600 ಮಂದಿ ಕುಳಿತುಕೊಳ್ಳಲು ವಿಐಪಿ ಗ್ಯಾಲರಿಯನ್ನು ನಿರ್ಮಾಣ ಮಾಡಲಾಗಿದ್ದು ಮೈದಾನ ಹಾಗೂ ಗ್ಯಾಲರಿ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ. ಒಂದೇ ಮೈದಾನದಲ್ಲಿ ಒಟ್ಟು ಮೂರು ಸುಸಜ್ಜಿತ ಹಾಕಿ ಮೈದಾನ ತಯಾರಾಗಿದ್ದು ಒಂದು ತಿಂಗಳ ಕಾಲ ನಡೆಯುವ ಈ ಹಾಕಿ ಉತ್ಸವದಲ್ಲಿ ಹಾಕಿ ಪ್ರಿಯರು ಪಾಲ್ಗೊಂಡು ಸಂಭ್ರಮಿಸಲಿದ್ದಾರೆ.
ಪಾಂಡಂಡ ಕುಟ್ಟಪ್ಪ- ಕಾಶಿ ಸಹೋದರರ ಪರಿಕಲ್ಪನೆಯಲ್ಲಿ ಕೊಡವ ಹಾಕಿ ಸಂಸ್ಥೆ ಮೂಲಕ ಪ್ರತಿವರ್ಷ ಒಂದೊಂದು ಕೊಡವ ಕುಟುಂಬದ ನೇತೃತ್ವದಲ್ಲಿ ಹಾಕಿ ಉತ್ಸವ ಆಯೋಜಿಸಲಾಗುತ್ತಿದೆ. ಪ್ರಕೃತಿ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಂದ ಸ್ದಗಿತಗೊಂಡಿದ್ದ ಹಾಕಿ ಉತ್ಸವಕ್ಕೆ ಈ ವರ್ಷ ಚಾಲನೆ ದೊರೆತಿದ್ದು 336 ತಂಡ ಪಾಲ್ಗೊಳ್ಳುತ್ತಿರುವುದು ಐತಿಹಾಸಿಕ ದಾಖಲೆ. ಅಪ್ಪಚೆಟ್ಟೋಳಂಡ ಹಾಕಿ ಉತ್ಸವಕ್ಕೆ 1.5 0 ರಿಂದ 2 ಕೋಟಿ ರೂ. ರಾಜ್ಯ ಸರ್ಕಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಾಕಿ ಉತ್ಸವವನ್ನು ವ್ಯವಸ್ಥಿತವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆ ನಡೆಸಲಾಗಿದೆ
ಕ್ರೀಡಾ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ
“ನಾಲ್ಕು ವರ್ಷದ ನಂತರ ಹಾಕಿ ಉತ್ಸವ ಆಯೋಜನೆಗೊಳ್ಳುತ್ತಿದೆ, ಉತ್ಸವಕ್ಕೆ ಹಾಕಿಅಕಾಡೆಮಿ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗಿದೆ.”
ಪಾಂಡಂಡ ಕೆ. ಬೋಪಣ್ಣ .
ಅಧ್ಯಕ್ಷರು, ಕೊಡವ ಹಾಕಿ ಅಕಾಡೆಮಿ
“ಜಿಲ್ಲೆಯಲ್ಲಿ 252 ಕುಟುಂಬಗಳಿದ್ದು 46 ಕೊಡವ ಕುಟುಂಬಗಳು ಹಾಕಿ ಅಕಾಡೆಮಿಯಲ್ಲಿ ನೋಂದಣಿ ಆಗಿವೆ. ಪ್ರಸಕ್ತ ಪಂದ್ಯಾಟದಲ್ಲಿ 336 ತಂಡಗಳು ಪಾಲ್ಗೊಳ್ಳುತ್ತಿರುವುದು ವಿಶೇಷ.
ಕುಲ್ಲೇಟಿರ ಅರುಣ ಬೇಬ
ಕೊಡವ ಹಾಕಿ ಅಕಾಡೆಮಿಯ ಹಿರಿಯ ನಿರ್ದೇಶಕ “.
“ಭಾರತದ ಹಾಕಿ ತಂಡದಲ್ಲಿ ಕೊಡಗಿನ ಯುವಕರು ಇಲ್ಲ. ಸೈನ್ಯದಲ್ಲಿ ಸೇರಲು ಯುವಕರಿಗೆ ಅವಕಾಶ ಕಲ್ಪಿಸಿಕೊಡುವ ಅಗತ್ಯವಿದೆ.ಭಾರತೀಯ ಸೈನ್ಯದಿಂದ ಆಯ್ಕೆ ಮಾಡುವ ಅಧಿಕಾರಿಗಳನ್ನು ಪಂದ್ಯಾಟಕ್ಕೆ ಕರೆಸಲಾಗುವುದು.ಅವರು ಯುವಕರನ್ನು ಆಯ್ಕೆ ಮಾಡಿ ತರಬೇತಿ ನೀಡಿ ಭಾರತ ಸೇನೆಗೆ ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಕುಕ್ಕೆರ ಜಯ ಚಿಣ್ಣಪ್ಪ
ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷ.
ಈ ಸಂದರ್ಭ ಕೊ.ಹಾ.ಅ ನಿರ್ದೇಶಕ ಚೈಯಂಡ ಸತ್ಯ, ಜೋರಿ ಆಫ್ ಅಫಿಲ್ ಶಿವಚಳಿಯಂಡ ಅಂಬಿ ಕಾರ್ಯಪ್ಪ, ತಾಂತ್ರಿಕ ನಿರ್ದೇಶಕ ನಾಯಕಂಡ ದೀಪು ಚಂಗಪ್ಪ, ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್, ಕಾಟುಮಣಿಯ0ಡ ಉಮೇಶ್, ಚೆ0ಗೇಟಿರ ಅಚ್ಚಯ್ಯ, ಕ್ರೀಡಾ ಕೂಟದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.








