ಮಡಿಕೇರಿ ಮಾ.18 : ಕರ್ನಾಟಕ ಹಿಂದಿನಂತಿಲ್ಲ, ಪ್ರಗತಿಥದತ್ತ ಸಾಗುತ್ತಿದೆ. ಜಾತಿ, ಮತ, ಭೇದವಿಲ್ಲದೆ ಪ್ರತಿಯೊಬ್ಬರಿಗೆ ಬದುಕುವ ಶಕ್ತಿಯನ್ನು ಸರ್ಕಾರ ತುಂಬುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಹೇಳಿದ್ದಾರೆ.
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸರ್ಕಾರ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಿ ದುಡಿಯುವ ವರ್ಗದ ಆದಾಯವನ್ನು ಹೆಚ್ಚಿಸುತ್ತಿದೆ. ವಿವಿಧ ಇಲಾಖೆಗಳಲ್ಲಿ ರೂಪಿಸಲಾಗಿರುವ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮೂಲಕ ಸಮೃದ್ಧಿಯ ಕರ್ನಾಟಕವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಫಲಾನುಭವಿಗಳ ಸಮ್ಮೇಳನದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ 30 ರಿಂದ 50 ಸಾವಿರ ಕುಟುಂಬಗಳಿಗೆ ಸರ್ಕಾರದ ಕಾರ್ಯಕ್ರಮಗಳ ಸೌಲಭ್ಯವನ್ನು ತಲುಪಿಸಲಾಗುತ್ತಿದೆ. ಆ ಮೂಲಕ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ. ಸರ್ಕಾರ ಮತ್ತು ಜನರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ದೂರ ದೃಷ್ಟಿಯ ರಾಜಕರಣಿ ಮುಂದಿನ ಜನಾಂಗದ ಬಗ್ಗೆ ಯೋಚಿಸುತ್ತಾನೆ. ಸಾಮಾನ್ಯ ರಾಜಕರಣಿ ಮುಂದಿನ ಚುನಾವಣೆ ಬಗ್ಗೆ ಚಿಂತಿಸುತ್ತಾನೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದ ಸುರಕ್ಷತೆ, ಗಡಿರಕ್ಷಣೆ, ಕಾನೂನು ಸುವ್ಯವಸ್ಥೆ, ಆರ್ಥಿಕ ಸಬಲತೆ, ರಸ್ತೆ, ರೈಲ್ವೆ ಅಭಿವೃದ್ಧಿ, ಸಾಮಾಜಿಕ ನ್ಯಾಯಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಕೆಂಪುಕೋಟೆಯ ಮೇಲೆ ಪ್ರಧಾನಮಂತ್ರಿಗಳು ಪ್ರತಿ ಮನೆಗೆ ಕುಡಿಯುವ ನೀರನ್ನು ನೀಡುವುದಾಗಿ ಭರವಸೆ ನೀಡಿದ್ದರು. 130 ಕೋಟಿ ಜನಸಂಖ್ಯೆಯ ದೇಶದ ಪ್ರತಿ ಮನೆಗೆ ನೀರನ್ನು ನೀಡುವುದು ಸುಲಭದ ಕೆಲಸವಾಗಿರಲಿಲ್ಲ. ಇದೇ ಕಾರಣಕ್ಕೆ ಹಿಂದಿನ ಪ್ರಧಾನಮಂತ್ರಿಗಳು ಈ ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ ನರೇಂದ್ರಮೋದಿ ಅವರು ನುಡಿದಂತೆ ನಡೆದಿದ್ದು, ಕಳೆದ ಮೂರು ವರ್ಷಗಳಲ್ಲಿ ದೇಶದ 12 ಕೋಟಿ ಮನೆಗಳಿಗೆ ನೀರನ್ನು ಒದಗಿಸಿದ್ದಾರೆ. ಕರ್ನಾಟಕ ರಾಜ್ಯದ 40 ಲಕ್ಷ ಮನೆಗಳು ನೀರಿನ ಸಂಪರ್ಕವನ್ನು ಪಡೆದಿವೆ. ಇದೊಂದು ಕ್ರಾಂತಿ ಎಂದು ಶ್ಲಾಘಿಸಿದ ಮುಖ್ಯಮಂತ್ರಿಗಳು ಇಚ್ಛಾಶಕ್ತಿಯ ಕೊರತೆಯಿಂದ ಕಳೆದ 70 ವರ್ಷಗಳ ಕಾಲ ಈ ರೀತಿಯ ಸಾಧನೆಗಳು ನಡೆದಿಲ್ಲವೆಂದು ಅಭಿಪ್ರಾಯಪಟ್ಟರು.
ಮೋದಿ ಅವರು ಸಾಧ್ಯವಿಲ್ಲದ್ದನ್ನು ಸಾಧ್ಯ ಮಾಡಿ ತೋರಿಸಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ದೇಶದ 53.43 ಲಕ್ಷ ರೈತರಿಗೆ 16 ಸಾವಿರ ಕೋಟಿ ಹಣವನ್ನು ಹಂಚಿಕೆ ಮಾಡಿದ್ದಾರೆ. ಸರ್ಕಾರ ಬಿಡುಗಡೆ ಮಾಡಿದ ಸಂಪೂರ್ಣ ಹಣ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ ಎಂದರು.
ರೈತರ ಸಂಕಷ್ಟಗಳನ್ನು ಅರಿತಿರುವ ನಾನು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ರೈತರ ಮಕ್ಕಳು ವಿದ್ಯಾವಂತರಾಗಿ ಉತ್ತಮ ಉದ್ಯೋಗಕ್ಕೆ ಸೇರುವ ಮೂಲಕ ರೈತನ ಆದಾಯ ಹೆಚ್ಚಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ರೈತನ ಆರ್ಥಿಕ ಶಕ್ತಿ ಹೆಚ್ಚಾದರೆ ನಾಡಿನ ಶಕ್ತಿ ಹೆಚ್ಚಾದಂತೆ ಎಂದು ಅಭಿಪ್ರಾಯಪಟ್ಟ ಅವರು, ರೈತ ಬೆಳೆ ಉತ್ಪತ್ತಿ ಮಾಡುವವನು ಮಾತ್ರವಲ್ಲ, ಗ್ರಾಹಕನು ಕೂಡ ಹೌದು. ಆದ್ದರಿಂದ ರೈತನಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದಿಂದ 5 ಲಕ್ಷ ರೂ. ಗೆ ಸಾಲದ ಮೊತ್ತವನ್ನು ಹೆಚ್ಚಿಸಲಾಗಿದೆ. ರೈತರ ಸುರಕ್ಷತೆಗಾಗಿ ಜೀವನ ಜ್ಯೋತಿ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
::: ಗ್ಯಾರಂಟಿ ಕಾರ್ಡ್ ಕಸದ ಬುಟ್ಟಿಗೆ :::
ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡುವ ಮೂಲಕ ಸ್ತ್ರೀ ಸಾಮಾಥ್ರ್ಯವನ್ನು ಹೆಚ್ಚಿಸಲಾಗುತ್ತಿದೆ. ಇಂದು “ದುಡ್ಡೇ ದೊಡ್ಡಪ್ಪ” ಎನ್ನುವ ಕಾಲ ಹೋಗಿ “ದುಡಿಮೆಯೇ ದೊಡ್ಡಪ್ಪ” ಎನ್ನುವ ಕಾಲ ಬಂದಿದೆ. ಎಲ್ಲರಿಗೂ ದುಡಿಮೆ ನೀಡುವ ಯೋಜನೆಯನ್ನು ನಮ್ಮ ಸರ್ಕಾರ ರೂಪಿಸಿದೆ. ದುಡಿಮೆಗೆ ಮಹತ್ವ ನೀಡುವ ನಾಡಿನಲ್ಲಿ ಸ್ವಾವಲಂಬಿ ಬದುಕು ಸಾಗಿಸಲು ಜನರು ಸಮರ್ಥರಾಗಿರುತ್ತಾರೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಅಧಿಕಾರದಲ್ಲಿದ್ದಾಗ ಜನರಿಗೆ ಏನನ್ನೂ ನೀಡಲಾಗದವರು ಈಗ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಇದು ಗ್ಯಾರಂಟಿ ಕಾರ್ಡ್ ಅಲ್ಲ. ಬೋಗಸ್ ಕಾರ್ಡ್, ವಿಸಿಟಿಂಗ್ ಕಾರ್ಡ್. ಇದನ್ನು ಜನ ಕಸದ ಬುಟ್ಟಿಗೆ ಹಾಕುತ್ತಾರೆ. ಎಲ್ಲರನ್ನು ಎಲ್ಲಾ ಸಂದರ್ಭದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಯಾರೂ ಮೋಸ ಮಾಡಬಾರದು. ಸ್ವಾಭಿಮಾನಿಗಳಾಗಿ ಬದುಕುವುದನ್ನು ತೋರಿಸಿಕೊಡಬೇಕೆಂದು ಹೇಳಿದರು.
ಈ ಹಿಂದೆ ಆಡಳಿತ ನಡೆಸಿದವರು ಸಾಮಾಜಿಕ ನ್ಯಾಯದ ಬಗ್ಗೆ ಭಾಷಣವನ್ನಷ್ಟೇ ಮಾಡುತ್ತಿದ್ದರು. ಆದರೆ ನಮ್ಮ ಸರ್ಕಾರ ತುಳಿತಕ್ಕೆ ಒಳಗಾದ ಎಸ್.ಟಿ. ಜನಾಂಗದ ಮೀಸಲಾತಿಯನ್ನು ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಿದೆ ಎಂದರು.
ಈ ಹಿಂದಿನ ಸರ್ಕಾರಗಳು ಅಧಿಕಾರ ಉಳಿಸಿಕೊಳ್ಳಲು ಭ್ರಷ್ಟಾಚಾರದಲ್ಲಿ ತೊಡಗಿದ್ದವು. ಘೋಷಣೆಯಾದ ಭಾಗ್ಯಗಳು ಜನರಿಗೆ ತಲುಪಿಲ್ಲ. ಸುಳ್ಳು ಆಶ್ವಾಸನೆಗಳ ಬದಲು ಕೆಲಸ ಮಾತನಾಡಬೇಕು. ಸಮಸ್ಯೆ ಇದ್ದಲ್ಲಿಗೆ ಸರ್ಕಾರ ಹೋಗಿ ಪರಿಹಾರ ಸೂಚಿಸಬೇಕೆ ಹೊರತು, ಹವಾನಿಯಂತ್ರಿತ ಕೋಣೆಯಲ್ಲಿ ಅಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ 6,800 ಕೋಟಿ ಬೆಳೆ ಪರಿಹಾರ ನೀಡಿದ್ದು, ಇದಕ್ಕೆ ರಾಜ್ಯದ ಮೊತ್ತವನ್ನು ಸೇರಿಸಿ ಒಟ್ಟು 13,600 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡುತ್ತಿದ್ದೇವೆ. ಹಿಂದಿನ ಸರ್ಕಾರಗಳು ಕೇಂದ್ರ ನೀಡಿದ್ದನ್ನು ರೈತರಿಗೆ ವಿತರಿಸಲು ಮೀನಾ ಮೇಷ ಎಣಿಸುತ್ತಿದ್ದವು. ಆದರೆ ಇಂದಿನ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಬದ್ಧವಾಗಿದೆ ಎಂದರು.










