ಮಡಿಕೇರಿ ಮಾ.18 : ಕೊಡಗು ಜಿಲ್ಲೆಗೆ ಕರ್ನಾಟಕ ರಾಜ್ಯದಲ್ಲಿಯೇ ವಿಶೇಷ ಸ್ಥಾನಮಾನವಿದೆ, ಇಲ್ಲಿ ಸ್ವರ್ಗದಂತಹ ನಿಸರ್ಗವಿದೆ, ವಿಶಿಷ್ಟವಾದ ಸಂಸ್ಕೃತಿ ಇದೆ. ಇಲ್ಲಿನ ಜನರು ಸ್ವಾಭಿಮಾನಿಗಳು ಎಂದು ಕೊಂಡಾಡಿದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಮೈಸೂರಿನೊಂದಿಗೆ ಕೊಡಗಿನ ಪ್ರವಾಸೋದ್ಯಮಕ್ಕೂ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.
ಮಡಿಕೇರಿಯಲ್ಲಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸ್ವಿಝರ್ ಲ್ಯಾಂಡ್ ನಂತಿರುವ ಕೊಡಗಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
::: ಉಚಿತ ವಿದ್ಯುತ್ :::
ಕೊಡಗಿನ ಕಾಫಿ ಬೆಳೆಗಾರರಿಗೆ 10 ಹೆಚ್.ಪಿ.ವಿದ್ಯುತ್ ಅನ್ನು ಉಚಿತವಾಗಿ ನೀಡಬೇಕೆನ್ನುವ ಬೇಡಿಕೆ ಇತ್ತು. ಕೊಡಗಿನ ಬೆಳೆಗಾರರ ಸಂಕಷ್ಟವನ್ನು ಅರಿತಿರುವ ನಾನು 10 ಹೆಚ್.ಪಿ.ವಿದ್ಯುತನ್ನು ಉಚಿತವಾಗಿ ನೀಡಲು ಆದೇಶಿಸಿದ್ದೇನೆ. ಬೆಳೆಗಾರರ ಹಳೆಯ ಬಾಕಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ 10 ಹೆಚ್.ಪಿ.ವಿದ್ಯುತ್ ಅನ್ನು ಉಚಿತವಾಗಿ ನೀಡಬೇಕೆಂದು ಈ ವೇದಿಕೆ ಮೂಲಕ ಅಧಿಕಾರಿಗಳಿಗೆ ಆದೇಶಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ 50,623 ರೈತರಿಗೆ 12 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.
ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿರುವುದರಿಂದ ಕೊಡಗು ಜಿಲ್ಲೆಗೆ 100 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ. ಕೊಡವ ಜನಾಂಗದ ಅಭಿವೃದ್ಧಿಗಾಗಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿಯೂ 10 ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಕೊಡವ ಸಮುದಾಯಕ್ಕೆ 7 ಏಕರೆ ಜಾಗವನ್ನು ರಿಯಾಯಿತಿ ದರದಲ್ಲಿ ನೀಡಲಾಗಿದೆ. ಭಾರತೀಯ ಸೇನೆಗೆ ಅತೀ ಹೆಚ್ಚು ಸೈನಿಕರನ್ನು ನೀಡಿದ ಕೊಡಗು ಜಿಲ್ಲೆಯ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಹೇಳಿದ ಮುಖ್ಯಮಂತ್ರಿಗಳು ಮಾಜಿ ಯೋಧರಿಗಾಗಿ ಆರೋಗ್ಯ, ಶಿಕ್ಷಣ ಮತ್ತು ವಸತಿ ಯೋಜನೆಗಾಗಿ ಅನುದಾನ ಮೀಸಲಿಡಲಾಗಿದೆ ಎಂದರು.
ಮಳೆಹಾನಿ ಸಂಭವಿಸಿದಾಗ ಹಿಂದಿನ ಸರ್ಕಾರಗಳು ಭಿಕ್ಷೆಯ ರೂಪದಲ್ಲಿ ಪರಿಹಾರವನ್ನು ನೀಡುತ್ತಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರು ಪರಿಹಾರದ ಮೊತ್ತವನ್ನು ಹೆಚ್ಚಿಸಿದರು. ಈ ಹಿಂದಿನ ಸರ್ಕಾರಗಳಿದ್ದಾಗ, ಕೊಡಗಿನ ಬೆಳೆಗಾರರಿಗೆ ಸಮರ್ಪಕವಾಗಿ ಬೆಳೆಪರಿಹಾರ ಬಂದಿರಲಿಲ್ಲ. ಈ ಬಾರಿ ಬೆಳೆಹಾನಿ ಪರಿಹಾರವಾಗಿ 132 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.
::: ಶಾಸಕರಿಗೆ ಆಶೀರ್ವಾದ ಮಾಡಿ :::
ಕೊಡಗಿನ ಇಬ್ಬರು ಶಾಸಕರನ್ನು ಹಾಡಿ ಹೊಗಳಿದ ಬಸವರಾಜ ಬೊಮ್ಮಾಯಿ ಇವರು ಜನಪ್ರಿಯ ಶಾಸಕರು ಎನ್ನುವುದಕ್ಕಿಂತ ಜನಪಯೋಗಿ ಶಾಸಕರು ಎಂದು ಶ್ಲಾಘಿಸಿದರು.
ಬೆಂಗಳೂರಿಗೆ ಬಂದಾಗ ಜಿಲ್ಲೆಯ ಕಡತಗಳನ್ನು ನನ್ನ ಬಳಿಗೆ ತಂದು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿಯೇ ಮರಳುತ್ತಿದ್ದರು. ಇವರುಗಳಿಗೆ ಅಭಿವೃದ್ಧಿಯ ಬಗ್ಗೆ ಕಾಳಜಿ ಇದೆ, ಇನ್ನು ಮುಂದೆಯೂ ಇವರಿಬ್ಬರ ಮೇಲೆ ನಿಮ್ಮ ಆಶೀರ್ವಾದವಿದ್ದರೆ ಕೈಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಬಹುದು ಮತ್ತು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದರು.
::: ಕ್ಷಮೆ ಕೋರಿದ ಸಿಎಂ :::
ಸಮಾವೇಶಕ್ಕೆ ಎರಡು ಗಂಟೆ ತಡವಾಗಿ ಬಂದದ್ದಕ್ಕೆ ಮುಖ್ಯಮಂತ್ರಿಗಳು ಸಭಿಕರ ಕ್ಷಮೆ ಕೋರಿದರು. ಪಕ್ಕದಲ್ಲೇ ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ಕಾರಣ ತಡವಾಗಿ ಬಂದೆ ಎಂದು ಹೇಳುವ ಮೂಲಕ ಸಿಎಂ ಆಶ್ಚರ್ಯ ಮೂಡಿಸಿದರು. ಯಾಕೆಂದರೆ ಸಿಎಂ ಬರುವವರೆಗೂ ಧ್ವನಿವರ್ಧಕಗಳು ಪರೀಕ್ಷೆಯ ನಿಷೇಧಾಜ್ಞೆಯನ್ನು ಮೀರಿ ಘರ್ಜಿಸುತ್ತಿದ್ದವು. ಫಲಾನುಭವಿಗಳ ಸಮಾವೇಶದ ಆಹ್ವಾನ ಪತ್ರಿಕೆಯಲ್ಲಿ ಬೆಳಗ್ಗೆ 11.30 ಕ್ಕೆ ಕಾರ್ಯಕ್ರಮವೆಂದು ಇತ್ತು. ಮುಖ್ಯಮಂತ್ರಿಗಳ ಪ್ರವಾಸದ ವೇಳಾಪಟ್ಟಿಯ ಪ್ರಕಾರ ಮಧ್ಯಾಹ್ನ 12ರಿಂದ 12.15 ರೊಳಗೆ ಮಡಿಕೇರಿ ತಲುಪಬೇಕಾಗಿತ್ತು.
ಆದರೆ ಸಿಎಂ ಎರಡು ಗಂಟೆ ತಡವಾಗಿ ಬಂದರು, ಸಭಿಕರು ಬಿಸಿಲಿನಿಂದ ಸಹನೆ ಕಳೆದುಕೊಂಡು ಮರಳಲು ನೋಡುತ್ತಿದ್ದಾಗ ಆಯೋಜಕರು ಜ್ಯೂಸ್ ಮತ್ತು ಬಿಸ್ಕೇಟ್ ನೀಡಿ ಸಮಾಧಾನ ಪಡಿಸುತ್ತಿದ್ದರು. ಗಾಂಧಿ ಮೈದಾನದ ಪಕ್ಕದಲ್ಲೇ ಇದ್ದ ಸಂತ ಮೈಕಲರ ಶಾಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿತ್ತು.
ಫಲಾನುಭವಿಗಳ ಸಮಾವೇಶದ ಅಧ್ಯಕ್ಷ, ಸಹಕಾರ ಸಚಿವ ಎಸ್.ಡಿ.ಸೋಮಶೇಖರ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ಮುಖ್ಯಮಂತ್ರಿಗಳು ವಿತರಿಸಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು ಮತ್ತು ಉದ್ಘಾಟಿಸಿದರು.










