ಮಡಿಕೇರಿ ಮಾ.20 : ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಸಮಾಜ ಸೇವಕ ಡಾ. ಮಂಥರ್ ಗೌಡ, ಶಿಕ್ಷಣದಿಂದ ಮಾತ್ರ ಬದಲಾವಣೆ ತರಲು ಸಾಧ್ಯ. ವಿದ್ಯೆಯನ್ನು ಯಾರು ಕಸಿಯುವುದಿಲ್ಲ. ಜೊತೆಗೆ ಸಮಾಜದಲ್ಲಿ ಗೌರವವೂ ದೊರೆಯುತ್ತದೆ. ಇಂದು ವಿವಿಧ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ದೊರೆಯಬೇಕು. ಎಚ್ಚರಿಕೆ ಹೆಜ್ಜೆ ಇಡುವ ಮೂಲಕ ಉತ್ತಮ ಸತ್ಪ್ರಜೆಯಾಗಿ ರೂಪುಗೊಳ್ಳಬೇಕು. ತಂತ್ರಜ್ಞಾನ ವೇಗದಲ್ಲಿ ನಾವು ಮುನ್ನಡೆಯಬೇಕು. ವಿದ್ಯಮಾನಗಳ ಬಗ್ಗೆ ಅರಿತುಕೊಳ್ಳ ಬೇಕೆಂದು ಕಿವಿಮಾತನಾಡಿದರು.
ಸಭಾಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ನೇತ್ರ ತಜ್ಞ ಡಾ. ಪ್ರಶಾಂತ್, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರೆ ಅವರಲ್ಲಿ ಸಕಾರಾತ್ಮಕ ಗುಣ ಹೆಚ್ಚಿ ಮತಷ್ಟು ಸಾಧನೆ ಮಾಡುವ ಗುರಿ ಬರುತ್ತದೆ ಎಂದರು.
ಮಡಿಕೇರಿ ನಗರ ಸಹಾಯಕ ನಿರೀಕ್ಷಕ ಶ್ರೀನಿವಾಸ್ ಮಾತನಾಡಿ, ಪ್ರತಿಭಾನ್ವಿತರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ. ಸಂವಿಧಾನ ವ್ಯವಸ್ಥೆಯಲ್ಲಿ ಶಿಕ್ಷಣವಂತ ರಾಗುವುದು ಸುಲಭವಿದೆ. ಸಂವಿಧಾನದ ಆಶಯವನ್ನು ಯುವಜನಾಂಗ ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಉದ್ಯಮಿ ದಾಮೋದರ್ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ವೃತ್ತಿ ಆಯ್ಕೆ ಮಾಡುತ್ತೇವೆ ಎಂದು ವಿದ್ಯಾರ್ಥಿ ದಿಸೆಯಲ್ಲಿ ನಿರ್ಧರಿಸಿ ಇದಕ್ಕೆ ಪೂರಕವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದರೆ ಯಶಸ್ಸು ಖಚಿತ ಎಂದು ಹೇಳಿದರು.
ಮಡಿಕೇರಿ ಸರಕಾರಿ ಮಹಿಳಾ ದರ್ಜೆ ಕಾಲೇಜಿನ ಸಹಾಯಕಿ ಪ್ರಾಧ್ಯಾಪಕಿ ಹೆಚ್.ಪಿ. ನಿರ್ಮಲ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಎಲ್ಲರಿಗೂ ಮಾದರಿ. ಶೋಷಣೆ, ದಬ್ಬಾಳಿಕೆಯನ್ನು ಮೆಟ್ಟಿ ನಿಂತು ಶಿಕ್ಷಣ ಪಡೆದು ವ್ಯವಸ್ಥೆಯನ್ನೇ ಅಂಬೇಡ್ಕರ್ ಸರಿಪಡಿಸಿ ಮಹಾನಾಯಕರಾಗಿದ್ದಾರೆ. ಆದರ್ಶ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಇರಬೇಕು. ವಿದ್ಯೆಯಿಂದ ವಿನಯ ಬರುತ್ತದೆ. ಇದರಿಂದ ಸಾರ್ಥಕ ಬದುಕು ಮುನ್ನಡೆಸಬಹುದು. ಅಧ್ಯಯನ ನಿರಂತರವಾಗಬೇಕು. ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಸಾಧನೆ ಸಾಧ್ಯ ಎಂದು ಕಿವಿಮಾತನಾಡಿದರು.
ಪ್ರಾಧ್ಯಾಪಕಿ ಕನ್ನಿಕಾ ಮಾತನಾಡಿ, ಸಮಾನ ಶಿಕ್ಷಣದ ಅವಕಾಶ ಇರುವುದರಿಂದ ಪ್ರತಿಯೊಬ್ಬರು ಮುಕ್ತ ಶಿಕ್ಷಣ ಜೊತೆಗೆ ಸರಕಾರದ ಯೋಜನೆ ಬಳಸಿಕೊಂಡು ಉಚಿತ ಶಿಕ್ಷಣವನ್ನು ಪಡೆಯಬಹುದು ಎಂದು ಸಲಹೆ ನೀಡಿದರು.
ಪ್ರಸೂತಿ ತಜ್ಞೆ ಡಾ. ಸೌಮ್ಯ ಪ್ರಕಾಶ್ ಮಾತನಾಡಿ, ತಾನು ಕೂಡ ದಸಂಸ ವತಿಯಿಂದ ಸನ್ಮಾನ ಸ್ವೀಕರಿಸಿದ್ದೆ ಇದು ಸಾಧನೆ ಮಾಡಲು ಪ್ರೋತ್ಸಾಹ ದೊರೆಯಿತು. ಇದರಿಂದ ತಾನು ಇಂದು ವೈದ್ಯಳಾಗಿದ್ದೇನೆ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.
ದಸಂಸ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆ.ನಿಡುಗಣೆ ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ, ದಸಂಸ ವಿಭಾಗೀಯ ಸಂಚಾಲಕ ವೀರಭದ್ರಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಣೇಶ್, ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ, ವೃತ್ತಿಪರ ಕೋರ್ಸ್‍ಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.