ಮಡಿಕೇರಿ ಮಾ.20 : ಕೊಡವ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರಕಾರ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿದೆ.
ಇಂದು ಮುಖ್ಯಮಂತ್ರಿಗಳು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಮಾ.18ರಂದು ನಾಪೋಕ್ಲುವಿನಲ್ಲಿ ಆಯೋಜಿತ 23ನೇ ವರ್ಷದ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಅಪ್ಪಚೆಟ್ಟೋಳಂಡ ಹಾಕಿ ಉತ್ಸವ 2023ಕ್ಕೆ ಚಾಲನೆ ನೀಡಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು. ಈ ಭರವಸೆಯಂತೆೆ ಇಂದು ಅಧಿಕೃತವಾಗಿ ಸಿ.ಎಂ. ನಿಗಮ ಸ್ಥಾಪನೆಯ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಈ ಹಿಂದೆ ಹಲವು ಬಾರಿ ಸರಕಾರದ ಮೇಲೆ ಒತ್ತಡ ಹೇರಲಾಗಿತ್ತು. ಜಿಲ್ಲೆಯ ಶಾಸಕರೊಂದಿಗೆ ವಿವಿಧ ಕೊಡವ ಸಂಘಟನೆಗಳ ಪ್ರಮುಖರು ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ನಿಗಮ ಸ್ಥಾಪನೆಗೆ ಆಗ್ರಹಿಸಿದ್ದರು.
ಸರಕಾರದ ಅಧಿಕೃತ ಆದೇಶಕ್ಕೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಅನೇಕ ವರ್ಷಗಳ ಬೇಡಿಕೆಯನ್ನು ಬಿಜೆಪಿ ಸರಕಾರ ಈಡೇರಿಸಿದೆ ಎಂದು ಶಾಸಕದ್ವಯರು ಹೇಳಿದ್ದಾರೆ. ಈ ಮೊದಲು ಯುಕೊ ಸಂಘಟನೆ ಕೊಡವ ಅಭಿವೃದ್ಧಿ ನಿಗಮ ಸ್ಪಾಪಿಸುವಂತೆ ನನ್ನ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗವನ್ನು ಕರೆದೊಯ್ಯಲಾಗಿತ್ತು. ಇದೀಗ ಸರಕಾರ ಈ ಬೇಡಿಕೆ ಈಡೇರಿಸಿದೆ. ಬೇಡಿಕೆಗೆ ಶೀಘ್ರ ಸ್ಪಂದಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಕೆ.ಜಿ.ಬೋಪಯ್ಯ ಹೇಳಿದರು.









