ಮಡಿಕೇರಿ ಮಾ.23 : ಕಾಫಿ ಬೆಳೆಗಾರರ 10 ಹೆಚ್.ಪಿ.ವರೆಗಿನ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಮುಖ್ಯಮಂತ್ರಿಗಳು ಆದೇಶ ಮಾಡಿದ್ದರು ಕೂಡ ಬಾಕಿ ಉಳಿಸಿಕೊಂಡಿರುವ ಬೆಳೆಗಾರರ ಪಂಪ್ ಸೆಟ್‍ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಕಚೇರಿವರೆಗೆ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಚೆಸ್ಕಾಂ ಅಧಿಕಾರಿಗಳು ಮುಖ್ಯಮಂತ್ರಿಗಳ ಆದೇಶವನ್ನೇ ಉಲ್ಲಂಘಿಸುತ್ತಿದ್ದಾರೆ. ಅವರುಗಳು ತಮ್ಮನ್ನೇ ಸೂಪರ್ ಸಿ.ಎಂ. ಎಂದು ಭಾವಿಸಿಕೊಂಡಿದ್ದಾರೆ. ಬಾಕಿ ಉಳಿಸಿಕೊಂಡಿರುವ ಬೆಳೆಗಾರರ ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದಕ್ಕೆ ಸಂಬಂಧಿಸಿದ ಅಧಿಕಾರಿಗಳು ರೈತರ ಕ್ಷಮೆ ಕೇಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಸುಜೈ ಬೋಪಯ್ಯ, ಲಕ್ಷ್ಮಣ್ ಅವರುಗಳು ಬಾಕಿ ಉಳಿಸಿಕೊಂಡಿರುವ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡುವಂತೆ ಮುಖ್ಯಮಂತ್ರಿಗಳು ಮಾ.18ರಂದು ಮಡಿಕೇರಿಯಲ್ಲಿ ಸೂಚಿಸಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ಬೆಳೆಗಾರರು ಮತ್ತು ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ರೀತಿ ಧೋರಣೆ ಮುಂದುವರೆದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ರೈತರ ಅನುಮತಿ ಇಲ್ಲದೇ ಅವರ ಜಮೀನುಗಳಿಗೆ ಚೆಸ್ಕಾಂ ಅಧಿಕಾರಿಗಳು ಬರಬಾರದು, ವಿದ್ಯುತ್ ಅದಾಲತ್‍ಗೆ ಆ ಇಲಾಖೆಯ ಅಧಿಕಾರಿಗಳನ್ನು ನೇಮಿಸದೆ ನಿವೃತ್ತ ನ್ಯಾಯಾಧೀಶರನ್ನು ಮುಖ್ಯಸ್ಥರನ್ನಾಗಿ ನೇಮಕಾತಿ ಮಾಡಬೇಕು, ವಿದ್ಯುತ್ ಬಿಲ್ ಬಾಕಿ ಪಾವತಿ ವ್ಯವಸ್ಥೆಗಾಗಿ ಬ್ಯಾಂಕ್ ಖಾತೆಗೆ ಜಮಾ(ಡಿಬಿಟಿ) ಎಂಬ ಪದ್ದತಿಯನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲಾಯಿತು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಚೆಸ್ಕಾಂ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯ ವೈಭವ ಸ್ವಾಮಿ ಮತ್ತು ಕಾರ್ಯಪಾಲಕ ಅಭಿಯಂತರ ಅನಿತಾ ಬಾಯಿ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿಗಳು ಸೂಚಿಸಿದ್ದರೂ ಕೂಡ ಬಾಕಿ ಉಳಿಕೆ ಮಾಡಿರುವ ರೈತರ ಪಂಪ್ ಸೆಟ್‍ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದಕ್ಕೆ ಕ್ಷಮೆ ಯಾಚಿಸಬೇಕೆಂದು ರೈತ ಸಂಘದ ಪ್ರಮುಖರು ಪಟ್ಟು ಹಿಡಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಅಧಿಕಾರಿ ಅನಿತಾ ಬಾಯಿ, ಬಾಕಿ ಪಾವತಿಗಾಗಿ ಈ ಹಿಂದೆ ಸರಕಾರ ಆದೇಶ ಹೊರಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಇದೀಗ ವಿದ್ಯುತ್ ಸಂಪರ್ಕ ಮರ ಜೋಡಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರಲ್ಲದೇ, ರೈತರಲ್ಲಿ ಕ್ಷಮೆ ಯಾಚಿಸಿದ ಪ್ರಸಂಗವೂ ನಡೆಯಿತು. ಬಳಿಕ ರೈತ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಯ ಮನವಿ ಪತ್ರವನ್ನು ಚೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜೈ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಚಿ ಇಟ್ಟೀರ ಸಭಿತ ಭೀಮಯ್ಯ, ಸಂಚಾಲಕರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕಾನೂನು ಸಲಹೆಗಾರ ಕೆ.ಬಿ. ಹೇಮಚಂದ್ರ, ಪ್ರಮುಖರಾದ ಆಲೇಮಾಡ ಮಂಜುನಾಥ್, ಲಕ್ಷ್ಮಣ ಗರಗಂದೂರು, ಭವಿನ್ ಕುಮಾರ್, ಭವ್ಯ ಮತ್ತಿತ್ತರು ಪಾಲ್ಗೊಂಡಿದ್ದರು.










