ಮಡಿಕೇರಿ ಮಾ.23 : ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ವಿರಾಜಪೇಟೆ ತಾಲ್ಲೂಕಿನ 21 ಸಾವಿರ ಮನೆಗಳಿಗೆ ಏಕ ಕಾಲದಲ್ಲಿ ಕುಡಿಯುವ ನೀರಿನ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಬಿಟ್ಟಂಗಾಲ ಗ್ರಾ.ಪಂ ವ್ಯಾಪ್ತಿಯ ಬಾಳುಗೋಡುವಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಲಾಗಿರುವ ಕುಡಿಯುವ ನೀರು ಸರಬರಾಜು ಟ್ಯಾಂಕ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಕೇಂದ್ರದಲ್ಲಿದ್ದ ಸರ್ಕಾರ ಐದು ವರ್ಷಕೊಮ್ಮೆ ಒಂದು ವಿಧಾನಸಭಾ ಕ್ಷೇತ್ರದ 3 ಅಥವಾ 4 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ನೀಡುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಒಂದು ತಾಲ್ಲೂಕಿಗೆ ಒಳಪಡುವ ಎಲ್ಲಾ ಗ್ರಾಮಗಳಿಗೆ ಏಕಕಾಲಕ್ಕೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕವನ್ನು ನೀಡುತ್ತಿದೆ ಎಂದರು.
ಈಗಾಗಲೇ ಒಂದೇ ಬಾರಿಗೆ 303 ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗ ಮತ್ತಷ್ಟು ಅಭಿವೃದ್ಧಿ ಹೊಂದಲಿದ್ದು, ಜನರ ಆಶೀರ್ವಾದ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.









