ಮಡಿಕೇರಿ ಮಾ.24 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ವಿಭಾಗ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಕ್ಷಯರೋಗ ದಿನಾಚರಣೆ’ ಕಾರ್ಯಕ್ರಮದ ಜಾಥಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಸಾದ್ ಅವರು ಚಾಲನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಾಥಗೆ ಚಾಲನೆ ನೀಡಿ ಮಾತನಾಡಿದ ಪ್ರಸಾದ್ ಅವರು ಆರೋಗ್ಯ ಇದ್ದಲ್ಲಿ ಭಾಗ್ಯವಿದ್ದಂತೆ. ಆದ್ದರಿಂದ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದರು.
ಕ್ಷಯ ರೋಗವು ಹಲವು ದಶಕಗಳಿಂದ ಇದ್ದು, ಕ್ಷಯರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಪಣ ತೊಡಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಳ್ಳಿಚಂಡ ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ಷಯರೋಗ ವಿಭಾಗದ ಮುಖ್ಯಸ್ಥರಾದ ರಾಮಚಂದ್ರ ಕಾಮತ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆನಂದ್, ಡಾ.ಗೋಪಿನಾಥ್, ಡಾ.ಸತೀಶ್, ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾದ ಪ್ರಸಾದ್ ಗೌಡ, ಇತರರು ಇದ್ದರು.
ಜಾಥವು ನಗರದ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಬಾಲಭವನ ತಲುಪಿತು. ಜಾಥದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿವಿಧ ಹಂತದ ಅಧಿಕಾರಿಗಳು. ಶ್ರುಶ್ರೂಷಕರು, ಆಶಾ ಕಾರ್ಯಕರ್ತೆಯರು ಇತರರು ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮ : ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು 2025 ರೊಳಗೆ ರಾಷ್ಟ್ರದಲ್ಲಿ ಕ್ಷಯರೋಗ ನಿರ್ಮೂಲನೆಗೆ ಗಮನಹರಿಸಬೇಕಿದೆ ಎಂದರು.
ದೇಶದಲ್ಲಿ ಈಗಾಗಲೇ ಪೊಲಿಯೋ ನಿರ್ಮೂಲನೆ ಆಗಿದ್ದು, ಅದರಂತೆ ಕ್ಷಯರೋಗವು ಸಹ ಇಲ್ಲದಂತೆ ಮಾಡುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾತನಾಡಿ ಕ್ಷಯರೋಗವು ಶ್ವಾಸಕೋಶಗಳಲ್ಲದೇ ದೇಹದ ಎಲ್ಲಾ ಅಂಗಗಳಿಗೂ ವ್ಯಾಪಿಸುತ್ತದೆ. ಶ್ವಾಸಕೋಶದ ಕ್ಷಯವು ಶೇಕಡಾ 70-80 ರಷ್ಟು ಇದ್ದು ಕ್ಷಯರೋಗದ ಹರಡುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ರೋಗಿಯು ಕೆಮ್ಮಿದಾಗ ಕಫದ ತುಂತುರು ಹನಿಗಳು ವಾತಾವರಣಕ್ಕೆ ತೂರಲ್ಪಡುತ್ತವೆ. ಅಂತಹ ಗಾಳಿಯನ್ನು ಇತರರು ಉಸಿರಾಡಿದಾಗ ಕ್ಷಯರೋಗದ ಸೋಂಕು ಹರಡುತ್ತದೆ. ಆದ್ದರಿಂದ ಕೆಮ್ಮುವಾಗ ಮತ್ತು ಸೀನುವಾಗ ಕಡ್ಡಾಯವಾಗಿ ಕರವಸ್ತ್ರ ಬಳಸಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ ಅವರು ಮಾತನಾಡಿ ಎರಡು ವಾರಕ್ಕಿಂತಲೂ ಹೆಚ್ಚು, ಕಫ ಬರುವುದು, ಕಫದಲ್ಲಿ ಒಮ್ಮೊಮ್ಮೆ ರಕ್ತ ಕಾಣಿಸಿಕೊಳ್ಳುವುದು. ಹಸಿವು ಮತ್ತು ತೂಕ ಕಡಿಮೆಯಗುವುದು. ಸಂಜೆಯ ಕಾಲ ಏರುವ ಜ್ವರ, ರಾತ್ರಿ ಮೈ ಬೆವರುವುದು. ಎದೆ ನೋವು ಮತ್ತು ಉಸಿರಾಡಲು ತೊಂದರೆ ಕಂಡುಬಂದಲ್ಲಿ ಹತ್ತಿತರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ಷಯರೋಗ ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್ ಅವರು ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆಯು 2030 ನೇ ಸಾಲಿಗೆ ಕ್ಷಯರೋಗ ನಿರ್ಮೂಲನೆ ಮಾಡುವ ಸಲುವಾಗಿ ಅನೇಕ ನೂತನ ರೂಪುರೇಷೆಗಳನ್ನು ಹಾಕಿಕೊಂಡು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ.ಆನಂದ್ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಅರ್‍ಎನ್‍ಟಿಸಿಪಿ ಕಾರ್ಯಕ್ರಮವು 2004 ನೇ ಏಪ್ರಿಲ್-15 ರಂದು ಪ್ರಾರಂಭಗೊಂಡಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 2022 ಡಿಸೆಂಬರ್ ಅಂತ್ಯದವರೆಗೆ ಸುಮಾರು 7992 ರೋಗಿಗಳನ್ನು ಚಿಕಿತ್ಸೆಗೆ ಗುರುತಿಸಿ ಚಿಕಿತ್ಸೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ 2022 ನೇ ಸಾಲಿನಲ್ಲಿ ಒಟ್ಟು 12,471 ಶಂಕಿತ ರೋಗಿಗಳನ್ನು ಕಫ ಪರೀಕ್ಷೆಗೆ ಒಳಪಡಿಸಿದ್ದು, ಅವುಗಳಲ್ಲಿ ಒಟ್ಟು 400 ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದೆ ಎಂದರು.
2022 ನೇ ಸಾಲಿನಲ್ಲಿ ಚಿಕಿತ್ಸೆಗೆ ದಾಖಲಾದ ಎಲ್ಲಾ ಕ್ಷಯರೋಗಿಗಳಿಗೆ ಎಚ್.ಐ.ವಿ.ಪರೀಕ್ಷೆ ಮಾಡಿದ್ದು, ಅವುಗಳಲ್ಲಿ 14 ಕ್ಷಯರೋಗಿಗಳಿಗೆ ಎಚ್.ಐ.ವಿ. ಸೋಂಕು ಇದ್ದು, ಎಲ್ಲಾ ರೋಗಿಗಳಿಗೆ ಸಿ.ಪಿ.ಟಿ. ಮತ್ತು ಎ.ಆರ್.ಟಿ. ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ 2022 ನೇ ಸಾಲಿನಲ್ಲಿ ಒಟ್ಟು 08 ಎಂ.ಡಿ.ಆರ್. ಕ್ಷಯರೋಗಿಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ನೂತನ ಮಾರ್ಗಸೂಚಿಯಂತೆ ಪತ್ತೆ ಹಚ್ಚಿದ ಎಲ್ಲಾ ಕ್ಷಯರೋಗಿಗಳಿಗೆ ಮಧುಮೇಹ ರೋಗದ ಪರೀಕ್ಷೆಯನ್ನು ಸಹ ಮಾಡಿದ್ದು, ಅವುಗಳಲ್ಲಿ 69 ಮಧುಮೇಹ ರೋಗಿಗಳನ್ನು ಪತ್ತೆ ಹಚ್ಚಲಾಗಿದೆ ಅವರುಗಳಿಗೆ ಮಧುಮೇಹ ಚಿಕಿತ್ಸೆಯನ್ನು ಸಹ ನೀಡಲಾಗುತ್ತ್ತಿದೆ. 2023 ನೇ ಸಾಲಿನ ಜನವರಿ ಯಿಂದ ಮಾರ್ಚ್ 20 ರ ವರೆಗೆ ಒಟ್ಟು 83 ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಆನಂದ್ ಅವರು ವಿವರಿಸಿದರು.
ಒಟ್ಟಾರೆ ಜಿಲ್ಲೆಯಲ್ಲಿ 198 ಕ್ಷಯರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 2021 ನೇ ಸಾಲಿನಲ್ಲಿ ನೋಂದಣಿಯಾದ ಕ್ಷಯರೋಗಿಗಳಲ್ಲಿ 394 ರೋಗಿಗಳಲ್ಲಿ 355 ರೋಗಿಗಳು ಗುಣ ಮುಖರಾಗಿರುತ್ತಾರೆ ಎಂದು ಮಾಹಿತಿ ನೀಡಿದರು. ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*