ಮಡಿಕೇರಿ ಮಾ.26 : ಮುಸಲ್ಮಾನರನ್ನೇ ಗುರಿಯಾಗಿಸಿಕೊಂಡು ಮೀಸಲಾತಿಯ ಹಕ್ಕನ್ನು ಕಸಿದುಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರ ತನ್ನ ಮೂಲ ಉದ್ದೇಶವನ್ನು ಬಹಿರಂಗ ಪಡಿಸಬೇಕೆಂದು ಜಾತ್ಯತೀತ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಪೋಕ್ಲುವಿನ ಎಂ.ಎ.ಮನ್ಸೂರ್ ಆಲಿ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದು ಮಾಡಿರುವ ಸರ್ಕಾರದ ನಿರ್ಧಾರದ ಹಿಂದೆ ದುರುದ್ದೇಶ ಅಡಗಿದೆ ಎಂದು ಟೀಕಿಸಿದ್ದಾರೆ.
ಬೇರೆ ಸಮುದಾಯಗಳಿಗೆ ಮೀಸಲಾತಿ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಮುಸ್ಲಿಮರ ಮೀಸಲಾತಿಯನ್ನು ಕಸಿದುಕೊಂಡಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಅಲ್ಪಸಂಖ್ಯಾತ ನಾಯಕರುಗಳು ಮುಸ್ಲಿಮರಿಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕೆಂದು ಒತ್ತಾಯಿಸಿರುವ ಮನ್ಸೂರ್ ಆಲಿ, ಶೇ.4 ರ ಮೀಸಲಾತಿಯನ್ನು ಸರ್ಕಾರ ಯಥಾಸ್ಥಿತಿ ಕಾಯ್ದುಕೊಳ್ಳದಿದ್ದಲ್ಲಿ ಬೃಹತ್ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವು ಮುಸಲ್ಮಾನರ ಸಬಲೀಕರಣಕ್ಕಾಗಿ ಮೀಸಲಾತಿಯ ಹಕ್ಕನ್ನು ನೀಡಿದೆ. ಈ ಹಕ್ಕಿನ ಮೂಲಕವೇ ತೀರ ಹಿಂದುಳಿದಿರುವ ಮುಸಲ್ಮಾನರು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತಿದ್ದಾರೆ. ಇದು ದೇಶದ ಅಭ್ಯುದಯಕ್ಕೂ ಪೂರಕವಾಗಿದೆ.
ಆದರೆ ಮೀಸಲಾತಿಯನ್ನೇ ರದ್ದುಗೊಳಿಸುವ ಮೂಲಕ ಸರ್ಕಾರ ಸಂವಿಧಾನದ ಆಶಯಕ್ಕೆ ಅಪಚಾರ ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಹತಾಶ ಮನೋಭಾವದಲ್ಲಿರುವ ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ತಂತ್ರಗಾರಿಕೆಯನ್ನು ಪ್ರಯೋಗಿಸಲು ಮುಂದಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಸಲ್ಮಾನರ ಮೀಸಲಾತಿಯನ್ನು ಕಸಿದುಕೊಂಡಿರುವುದು ಕೂಡ ಚುನಾವಣಾ ಗಿಮಿಕ್ ಆಗಿದೆ ಎಂದು ಅವರು ಆರೋಪಿಸಿದ್ದಾರೆ.
ಮುಸಲ್ಮಾನರನ್ನು ಕಡೆಗಣಿಸಿ ರಾಜಕೀಯ ಲಾಭ ಮಾಡಿಕೊಳ್ಳಬಹುದೆನ್ನುವ ಭ್ರಮೆಯಲ್ಲಿ ಬಿಜೆಪಿ ಸರ್ಕಾರವಿದೆ. ಆದರೆ ಇಂದು ರಾಜ್ಯದಲ್ಲಿ ಪ್ರಜ್ಞಾವಂತ ಮತದಾರರಿದ್ದು, ಸರ್ವಾಧಿಕಾರದ ದ್ವೇಷ ರಾಜಕಾರಣ ನಾಶವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.










