ಮಡಿಕೇರಿ ಮಾ.27 : ವಿದ್ಯಾರ್ಥಿಗಳು ಪರೀಕ್ಷೆ ಎಂದ ಕೂಡಲೇ ಭಯಪಡದೆ ಆತ್ಮಸ್ಥೈರ್ಯದಿಂದ ಎದುರಿಸಬೇಕೆಂದು ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ನ ಅಧ್ಯಕ್ಷೆ ಅರುಣಾ ದಿವಾಕರ್ ಕಿವಿಮಾತು ಹೇಳಿದರು.
ವಿರಾಜಪೇಟೆ ತಾಲೂಕಿನ ಚನ್ನಯ್ಯನಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮ್ಮ ಸ್ವಂತ ಹಣದಲ್ಲಿ ಕೊಂಡ ವಸ್ತುವನ್ನು ಸುರಕ್ಷಿತವಾಗಿ ನೋಡುವಂತೆಯೆ, ಸಾರ್ವಜನಿಕರ ಸರ್ವತ್ತೋಮುಖ ಅಭಿವೃದ್ಧಿಗಾಗಿ ಮೀಸಲಿರುವ ಆಸ್ತಿಯನ್ನು ರಕ್ಷಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಸಾಧ್ಯ ಎಂದರು.
ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕಡೆ ಹೆಚ್ಚಿನ ಗಮನಹರಿಸಬೇಕೆಂದು ಟ್ರಸ್ಟಿನ ಸಂಯೋಜಕ ಮುರಳೀಧರ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಚನ್ನಯ್ಯನಕೋಟೆ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಒಂದರಿಂದ ಎಂಟನೇ ತರಗತಿ ವರೆಗಿನ ಎಲ್ಲ ಮಕ್ಕಳಿಗೂ ಟೀ ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟನ್ನು ಒಳಗೊಂಡ ಸಮವಸ್ತ್ರವನ್ನು ಟ್ರಸ್ಟ್ ನ ವತಿಯಿಂದ ಕೊಡುಗೆಯಾಗಿ ನೀಡಲಾಯಿತು. ಇದ್ದಲ್ಲದೆ ಮಾಲ್ದಾರೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 228 ಮತ್ತು ಘಟ್ಟದಳ ಶಾಲೆಯ 15 ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು.
ಚನ್ನಯ್ಯನಕೋಟೆ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಕೇಶವಮೂರ್ತಿ, ಪಾಲಿಬೆಟ್ಟ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಕರುಂಬಯ್ಯ, ಕಾಕೋಟುಪರಂಬು ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ್, ಶಾಲೆಯ ಮುಖ್ಯೋಪಾಧ್ಯಾಯಿನಿ ಸಿದ್ದರಾಜಮ್ಮ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.









