ಮಡಿಕೇರಿ ಮಾ.27 : ಶ್ರೀ ನಿರ್ಮಲಾನಂದ ಸ್ವಾಮಿಗಳ ಬಗ್ಗೆ ತಾನು ಆಡಿದ ಮಾತನ್ನು ತಿರುಚಲಾಗಿದೆ ಎಂದು ತನ್ನ ಪಕ್ಷದವರನ್ನು ತೃಪ್ತಿ ಪಡಿಸಲು ಜೆಡಿಎಸ್ ಪಕ್ಷದವರ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾಡಿದ್ದಾರೆ ಎಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ವಕ್ತಾರ ಸೂದನ್ ಎಸ್.ಈರಪ್ಪ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶ್ರೀನಿರ್ಮಲಾನಂದ ಸ್ವಾಮಿಗಳು ಎಲ್ಲಾ ಪಕ್ಷ, ಜನಾಂಗ, ಸಮುದಾಯದವರ ಗೌರವಕ್ಕೆ ಪಾತ್ರರಾದವರು, ಇವರನ್ನು ಎಲ್ಲರೂ ಗೌರವದಿಂದ ಕಾಣುತ್ತಾರೆ ಎಂದು ಹೇಳಿದ್ದಾರೆ.
ವಿದ್ಯಾಪೀಠದಲ್ಲಿ ಜಾತ್ಯತೀತವಾಗಿ ಎಲ್ಲಾ ವರ್ಗದ ಮಂದಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸ್ವಾಮೀಜಿಗಳು ತಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಂಡಿದ್ದಾರೆ. ಆದರೆ ಪ್ರಚಾರಕ್ಕಾಗಿ ಮಾತನಾಡುವ ಕಾರ್ಯಪ್ಪ ಅವರು ತಾನು ಏನು ಹೇಳುತ್ತಿದ್ದೇನೆ ಎನ್ನುವುದರ ಬಗ್ಗೆ ಅರಿವಿಲ್ಲದೆ ಹೇಳಿಕೆ ನೀಡಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಂಗಾಯಣದ ನಿರ್ದೇಶಕರಾಗಿ ಉನ್ನತ ಸ್ಥಾನದಲ್ಲಿರುವವರು ಸರ್ವರಿಗೂ ಗೌರವ ನೀಡುವ ಮತ್ತು ಸಹನೆಯಿಂದ ನಡೆದುಕೊಳ್ಳುವ ದೊಡ್ಡ ಗುಣವನ್ನು ಹೊಂದಿರಬೇಕು. ಹೆಜ್ಜೇನು ಗೂಡಿಗೆ ಕಲ್ಲೆಸೆಯುವ ಪ್ರವೃತ್ತಿಯನ್ನು ಕಾರ್ಯಪ್ಪ ಅವರು ಬಿಡಬೇಕೆಂದು ಒತ್ತಾಯಿಸಿದ್ದಾರೆ.
ಕೊಡಗಿನ ಕೊಡವ ಜನಾಂಗದವರ ಬಗ್ಗೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಅವರು ಆಡಿದ ಮಾತುಗಳನ್ನು ಕೂಡ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿರುವ ಸೂದನ ಈರಪ್ಪ, ಯಾವುದೇ ಜಾತಿ, ಜನಾಂಗ, ಸಮಾಜ ಮತ್ತು ಸ್ವಾಮೀಜಿಗಳ ನಿಂದನೆ ಸರಿಯಲ್ಲ ಎಂದು ತಿಳಿಸಿದ್ದಾರೆ.









