ಮಡಿಕೇರಿ ಮಾ.27 : ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಮೀಸಲಿದ್ದ 2ಬಿ ಮೀಸಲಾತಿಯನ್ನು ಪುನರ್ ಸ್ಥಾಪಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಎಸ್‍ಡಿಪಿಐ ಪ್ರಮುಖರು ಹಾಗೂ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಎಸ್‍ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಮಿನ್ ಮೊಹಿಸಿನ್, ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ.4 ಮೀಸಲಾತಿಯನ್ನು ರದ್ದು ಮಾಡಿ ಮತ್ತೊಂದು ಸಮುದಾಯಕ್ಕೆ ನೀಡಿರುವುದು ಖಂಡನೀಯ ಎಂದರು.
ಮೀಸಲಾತಿ ಎನ್ನುವುದು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ ನೀಡುವಂತದ್ದು, ಮುಸಲ್ಮಾನರು ಧಾರ್ಮಿಕ ಅಲ್ಪಸಂಖ್ಯಾತರು, ಧರ್ಮ ಆಧಾರಿತ ಮೀಸಲಾತಿಯನ್ನು ರದ್ದು ಮಾಡುತ್ತೇವೆ ಎನ್ನುವುದು ಸರಿಯಾದ ಕ್ರಮವಲ್ಲ ಎಂದರು.
ಮುಸಲ್ಮಾನರು ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿದ್ದು, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಅವರಿಗೆ ಮೀಸಲಾತಿ ಕಡ್ಡಾಯವಾಗಿ ನೀಡಬೇಕೆಂದು ಹೇಳಲಾಗಿದೆ. ಆದರೆ ಸರ್ಕಾರ ಯಾವುದೇ ಆಗುಹೋಗುಗಳನ್ನು ಚರ್ಚಿಸದೆ ಏಕಾಏಕಿ ತೀರ್ಮಾನ ಕೈಗೊಳ್ಳವ ಮೂಲಕ ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದರು.
ಸರ್ಕಾರ ಮನುಷ್ಯರಿಗೆ ಇರುವ ಮೂಲ ಸೌಕರ್ಯಗಳನ್ನು ನೀಡಿಲ್ಲ, ಉದ್ಯೋಗ ನೀಡಿಲ್ಲ, ಸಾಮಾಜಿಕವಾಗಿ ಅಭಿವೃದ್ಧಿಗಳಿಲ್ಲ, ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಅಮಿನ್ ಮೊಹಿಸಿನ್ ಸಮಾಜದ ಸೌಹಾರ್ಧತೆಯನ್ನು ಕೆಡಿಸಿ ರಾಜಕೀಯ ಲಾಭ ಮಾಡಿಕೊಳ್ಳುವ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಕೆಟ್ಟ ಪರಿಸ್ಥಿತಿ ಎದುರಿಸಲಿದೆ ಎಂದು ಭವಿಷ್ಯ ನುಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, ಸದಸ್ಯರಾದ ಬಶೀರ್, ಮನ್ಸೂರ್ ಆಲಿ, ಸಲಂ ಕೂಡಿಗೆ, ಝಕ್ರಿಯಾ, ಮಡಿಕೇರಿ ನಗರಾಧ್ಯಕ್ಷ ರಿಜ್ವಾನ್, ಹೋರಾಟಗಾರ ಮೊಣ್ಣಪ್ಪ, ಪ್ರಮುಖರಾದ ಮಂಜುನಾಥ್ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









