ಮಡಿಕೇರಿ ಮಾ.27 : ವಾಂಡರರ್ರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಏ.1 ರಿಂದ ಮೇ1 ರವರೆಗೆ ಒಂದು ತಿಂಗಳ ಅವಧಿಯ ‘ಶಂಕರ ಸ್ವಾಮಿ ಸ್ಮರಣಾರ್ಥ’ 29ನೇ ಉಚಿತ ಬೇಸಿಗೆ ಶಿಬಿರ ನಡೆಯಲಿದೆ ಎಂದು ಕ್ಲಬ್‍ನ ಸದಸ್ಯರಾದ ಎಸ್.ಟಿ.ವೆಂಕಟೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಈಗಾಗಲೇ ಶಿಬಿರವನ್ನು ಆರಂಭಿಸಲಾಗಿದೆ. ಅಧಿಕೃತವಾಗಿ ಶಂಕರ ಸ್ವಾಮಿ ಅವರ ಜನ್ಮದಿನವಾದ ಏ.1 ರಂದು ಬೆಳಗ್ಗೆ 8 ಗಂಟೆಗೆ ಶಿಬಿರಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ. ಶಿಬಿರದಲ್ಲಿ ಇನ್ನೂರಕ್ಕೂ ಹೆಚ್ಚಿನ ಮಕ್ಕಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಪ್ರಸ್ತುತ ಕೆಲವು ತರಗತಿಗಳ ಪರೀಕ್ಷೆ ನಡೆಯುತ್ತಿದ್ದು, ಶಿಬಿರ ಆರಂಭಗೊಂಡಿದ್ದರೂ ಪರೀಕ್ಷೆಯ ಬಳಿಕ ಆಸಕ್ತ ಮಕ್ಕಳು ಶಿಬಿರಕ್ಕೆ ಸೇರ್ಪಡೆಗೊಳ್ಳಬಹುದೆಂದು ತಿಳಿಸಿದರು.
ಶಿಬಿರ ಬೆಳಗ್ಗೆ 6 ಗಂಟೆಗೆ ಪ್ರತಿನಿತ್ಯ ಆರಂಭಗೊಳ್ಳುತ್ತದೆ. ಪ್ರಮುಖವಾಗಿ ಈ ಶಿಬಿರದಲ್ಲೀ ಮಕ್ಕಳಿಗೆ ಪ್ರಾಣಾಯಾಮ, ಯೋಗ, ಹಾಕಿ, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡೆಗಳ ತರಬೇತಿಯನ್ನು ನೀಡಲಾಗುತ್ತದೆ. ತರಬೇತುದಾರರಾಗಿ ಬೊಪ್ಪಂಡ ಶ್ಯಾಂ ಪೂಣಚ್ಚ, ಬಾಳೆಯಡ ಕಿಶನ್ ಪೂವಯ್ಯ, ಕ್ಲಬ್‍ನ ಅಧ್ಯಕ್ಷರಾದ ಕಿರುಂದಂಡ ಗಣೇಶ್, ಕೋಟೇರ ಮುದ್ದಯ್ಯ, ಬಾಬು ಸೋಮಯ್ಯ ಅವರು ತರಬೇತಿಯನ್ನು ನೀಡಲಿದ್ದಾರೆ ಎಂದರು.
ಮಕ್ಕಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸುವ ಚಿಂತನೆಯಡಿ ಶಿಬಿರವನ್ನು ವರ್ಷಂಪ್ರತಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಟವಾಡಿ ಬೆಳೆದ ಸಾಕಷ್ಟು ಮಂದಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತವಾದ ಸಾಧನೆ ಮಾಡಿದ್ದಾರೆಂದು ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ತರಬೇತುದಾರರು ಹಾಗೂ ಕ್ಲಬ್ ಸದಸ್ಯರಾದ ಬೊಪ್ಪಂಡ ಶ್ಯಾಂ ಪೂಣಚ್ಚ ಮಾತನಾಡಿ, ಬೆಳಗ್ಗಿನ ಜಾವ ಮಕ್ಕಳನ್ನು ಮೈದಾನಕ್ಕೆ ಕರೆ ತರುವ ಮೂಲಕ ಅವರಲ್ಲಿ ಶಿಸ್ತು, ಸಮಯ ಪ್ರಜ್ಷೆ, ದಕ್ಷತೆಯ ಗುಣಗಳನ್ನು ಮೂಡಿಸುವುದು ಶಿಬಿರದ ಉದ್ದೇಶವಾಗಿದೆ. ಶಿಬಿರದ ಕೊನೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಶಿಬಿರಾರ್ಥಿಗಳೆಲ್ಲರಿಗೂ ಬಹುಮಾನ ವಿತರಿಸಲಾಗುತ್ತದೆ ಎಂದು ಹೇಳಿದರು.
ಕ್ಲಬ್ ಸದಸ್ಯರಾದ ಕಾರೇರ ಕವನ್ ಮಾತನಾಡಿ, ತಿಂಗಳ ಅವಧಿಯ ಶಿಬಿರದಲ್ಲಿ ಪ್ರತಿ ವಾರ ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಆಹ್ವಾನಿಸಿ, ಅವರನ್ನು ಮಾತನಾಡಿಸುವ ಮೂಲಕ ಮಕ್ಕಳಲ್ಲಿ ಹೆಚ್ಚಿನ ಸಾಧನೆಗೆ ಪ್ರೇರಣೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಕಾರೇರ ಮುದ್ದಯ್ಯ, ಸದಸ್ಯರುಗಳಾದ ಕಿರುಂದಂಡ ಗಣೇಶ್ ಹಾಗೂ ಬಾಬು ಸೋಮಯ್ಯ ಉಪಸ್ಥಿತರಿದ್ದರು.









