ಮಡಿಕೇರಿ ಮಾ.27 : ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕಾಗಿ ರೂಪಿಸಿರುವ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿಯನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಮಾ.29 ರಂದು ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಮೂರ್ನಾಡಿನಲ್ಲಿ ‘ರೈತ ಸಮಾವೇಶ’ ಆಯೋಜಿಸಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಯಮುನಾ ಚಂಗಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಮುದಾಯವನ್ನು ಸಶಕ್ತಗೊಳಿಸುವ ಮೂಲಕ ರಾಷ್ಟ್ರವನ್ನು ಬಿಲಿಷ್ಟವಾಗಿ ಕಟ್ಟುವ ಚಿಂತನೆ ಬಿಜೆಪಿಯದ್ದು. ಈ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಪೂರಕವಾದ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿರುವುದಾಗಿ ಹೇಳಿದರು.
ಮಡಿಕೇರಿ ಮಂಡಲದ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್ ಮಾತನಾಡಿ, ಮಾ.29 ರಂದು ಮೂರ್ನಾಡು ಕೊಡವ ಸಮಾಜದಲ್ಲಿ ರೈತ ಸಮಾವೇಶ ನಡೆಯಲಿದೆ. ಇದಕ್ಕೂ ಮುನ್ನ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯನ್ನು ಆಯೋಜಿಸಲಾಗಿದೆಯೆಂದು ಮಾಹಿತಿಯನ್ನಿತ್ತರು.
ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ, ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಮಡಿಕೇರಿ ನಗರ, ಗ್ರಾಮಾಂತರ, ಸೋಮವಾರಪೇಟೆ ಮತ್ತು ವಿರಾಜಪೇಟೆ ಮಂಡಳದಿಂದ ತಲಾ ಇಬ್ಬರು ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕುಂದಳ್ಳಿ ದಿನೇಶ್, ಸೋಮವಾರಪೇಟೆ ಮಂಡಳ ರೈತ ಮೋರ್ಚಾ ಅಧ್ಯಕ್ಷರಾದ ಮಚ್ಚಂಡ ಪ್ರಕಾಶ್ ಉಪಸ್ಥಿತರಿದ್ದರು.









