ಮಡಿಕೇರಿ ಮಾ.27 : ಲಂಚ ಸ್ವೀಕಾರದ ಆರೋಪದಡಿ ಇತ್ತೀಚೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು ನಾಲ್ವರು ಆರೋಪಿಗಳ ವಿರುದ್ದ ಎಫ್‍ಐಆರ್ ದಾಖಲಿಸಿ ಕೇವಲ ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ 3ನೇ ಆರೋಪಿಯನ್ನು ಇಲ್ಲಿಯವರೆಗೆ ಬಂಧಿಸಿಲ್ಲವೆಂದು ಆರೋಪಿಸಿ ಮತ್ತು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಮಡಿಕೇರಿ ನಗರಸಭಾ ಸದಸ್ಯರ ಸಹಿತ ಭ್ರಷ್ಟಾಚಾರ ವಿರೋಧಿ ಸಮಿತಿಯ ಪ್ರಮುಖರು ಕೊಡಗು ಲೋಕಾಯುಕ್ತ ಡಿವೈಎಸ್‍ಪಿ ಅವರಿಗೆ ಮನವಿ ಸಲ್ಲಿಸಿದರು.
ಮೂರನೇ ಆರೋಪಿಯಾಗಿರುವ ಮಡಿಕೇರಿಯ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಹಿಳಾ ಅಧಿಕಾರಿಯ ಬಂಧನಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಡಗಳಿಗೆ ಇಲಾಖೆ ಮಣಿಯಬಾರದು ಎಂದು ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಸದಸ್ಯರಾದ ಮಹೇಶ್ ಜೈನಿ, ಕವನ್ ಕಾವೇರಪ್ಪ, ಚಂದ್ರು ಅವರುಗಳು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಡಿವೈಎಸ್‍ಪಿ ಪವನ್ ಕುಮಾರ್, ಲೋಕಾಯುಕ್ತಕ್ಕೆ ಅದರದ್ದೇ ಆದ ಕಾನೂನು, ನೀತಿ, ನಿಯಮಗಳಿವೆ. ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಕಾನೂನು ಪ್ರಕ್ರಿಯೆಗಳಿವೆ. ದಾಳಿ ಸಂದರ್ಭ ಕಾಲ್ ಡಿಟೇಲ್‍ಗಳಿದ್ದ ಮೊಬೈಲ್‍ಗಳನ್ನು ವಶಕ್ಕೆ ಪಡೆಯಲಾಗಿದ್ದು, ಎಲ್ಲವನ್ನು ಎಫ್‍ಎಸ್‍ಎಲ್ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಆ ವರದಿ ಕೈಸೇರಿದ ಬಳಿಕವೇ ಮುಂದಿನ ಕಾನೂನು ಕ್ರಮ ಜರುಗಿಸಲು ಸಾಧ್ಯವಾಗುತ್ತದೆ.
ಈ ಎಲ್ಲಾ ವಿಚಾರಗಳನ್ನು ಲೋಕಾಯುಕ್ತದ ಉನ್ನತ ಅಧಿಕಾರಿಗಳು ಹಾಗೂ ಕಾನೂನು ವಿಭಾಗಕ್ಕೆ ಮಾಹಿತಿ ನೀಡಲಾಗಿದೆ ಎಂದು ವಿವರಿಸಿದರು.
ಲೋಕಾಯುಕ್ತ ಎಂದಿಗೂ ಸೂಕ್ತ ಸಾಕ್ಷಿಗಳಿಲ್ಲದೇ ಯಾರನ್ನೂ ಬಂಧಿಸಿಲ್ಲ. ದಾಳಿಯ ಸಂದರ್ಭ ರಾಸಾಯನಿಕ ಹಾಗೂ ತಾಂತ್ರಿಕ ಸಾಕ್ಷಿ ಸಂಗ್ರಹಿಸಲಾಗಿದ್ದು, ಅದರಂತೆ ಬಂಧನ ಪ್ರಕ್ರಿಯೆ ನಡೆದಿದೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿದ್ದು, ಯಾವುದೇ ಒತ್ತಡ ಆಮಿಷಗಳಿಗೆ ಒಳಗಾಗುವುದಿಲ್ಲ. ಸಾರ್ವಜನಿಕರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮನವಿ ಸಲ್ಲಿಸುವ ಸಂದರ್ಭ ಭ್ರಷ್ಟಾಚಾರ ವಿರೋಧಿ ಸಮಿತಿ ಪ್ರಮುಖರಾದ ಕುಕ್ಕೇರ ಅಜಿತ್, ಕುಮಾರ್, ಸತ್ಯ ಕರ್ಕೆರಾ, ತಿಮ್ಮಯ್ಯ, ಶೇಷಪ್ಪ ರೈ, ತಿರುಪತಿ ಮತ್ತಿತ್ತರರು ಹಾಜರಿದ್ದರು.









