ಮಡಿಕೇರಿ ಮಾ.27 : ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ದೇವರ ದಾಸಿಮಯ್ಯ ಅವರು 11 ನೇ ಶತಮಾನದಲ್ಲಿ ಸಾಕಷ್ಟು ಬದಲಾವಣೆ ತಂದರು ಎಂದು ನಗರಸಭೆ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ ಅವರು ಹೇಳಿದ್ದಾರೆ.
ನಗರದ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟಗಳ ಸಹಯೋಗದಲ್ಲಿ ಸೋಮವಾರ ನಡೆದ ‘ವಿಶ್ವಮಾನ್ಯ ಆದ್ಯ ವಚನಕಾರ ದೇವರ ದಾಸಿಮಯ್ಯ’ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹತ್ತನೇ ಶತಮಾನದ ಉತ್ತರಾರ್ಧದಲ್ಲಿ ದೇವರ ದಾಸಿಮಯ್ಯ ಅವರಿಂದ ವಚನ ಸಾಹಿತ್ಯವು ಪ್ರಾರಂಭಗೊಂಡು 19 ನೇ ಶತಮಾನದವರೆಗೂ ಬೆಳೆದು ಬಂದಿರುವುದನ್ನು ಕಾಣುತ್ತೇವೆ ಎಂದರು.
ಹಲವು ಸಾಧು ಸಂತರು, ಶರಣ, ಶರಣೇಯರ ಕ್ಷೇತ್ರ ಕಲ್ಬುರ್ಗಿ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲೂ ಹಲವು ಪ್ರಥಮಗಳನ್ನು ಸ್ಥಾಪಿಸಿದ್ದು, ದೇವರ ದಾಸಿಮಯ್ಯ ಅವರು ಈಗಿನ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಜನಿಸಿ, ವಚನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಬಿ.ಸಿ.ಶಂಕರಯ್ಯ ಅವರು ಮಾತನಾಡಿ ದೇವರ ದಾಸಿಮಯ್ಯ ಅವರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯಕ್ಕೆ ಆದ್ಯತೆ ನೀಡಿದ್ದರು ಎಂದರು.
ದೇವರ ದಾಸಿಮಯ್ಯ ಅವರನ್ನು ದಾಸ, ದಾಸಿಮಯ್ಯ, ದಾಸಿದೇವ, ದೇವದಾಸ, ಜೇಡರ ದಾಸಿಮಯ್ಯ, ದೇವರ ದಾಸಿಮಯ್ಯ ಹೀಗೆ ಹಲವು ಹೆಸರಿನಲ್ಲಿ ಕರೆಯುತ್ತಾರೆ ಎಂದರು.
ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಹಲವರ ವಾದ. ಬಸವಣ್ಣನವರ ಹಿರಿಯ ಸಮಕಾಲೀನರು. ದೇವರ ಮತ್ತು ಜೇಡರ ದಾಸಿಮಯ್ಯ ಇಬ್ಬರು ಒಂದೇ ಆಗಿದ್ದು, ದಾಸಿಮಯ್ಯನವರು ನೇಯ್ಗೆಯ ಕಾಯಕ ಮಾಡುವುದರಿಂದ ಜೇಡ ಎಂದು ದೇವರನ್ನು ಆರಾಧಿಸಿ ದೇವರೆಂಬ ವಿಶೇಷಣ ಕಾಣುತ್ತೇವೆ ಎಂದು ಬಿ.ಸಿ.ಶಂಕರಯ್ಯ ಅವರು ವಿವರಿಸಿದರು.
‘ಪತ್ರಕರ್ತರಾದ ನಾಗರಾಜ ಶೆಟ್ಟಿ ಅವರು ಮಾತನಾಡಿ ಜಿಲ್ಲೆಯಲ್ಲಿ ಹೊಸದಾಗಿ ಕುಶಾಲನಗರ ಮತ್ತು ಪೊನ್ನಂಪೇಟೆ ಎರಡು ತಾಲ್ಲೂಕುಗಳು ರಚಿಸಲ್ಪಟ್ಟಿವೆ. ಆ ನಿಟ್ಟಿನಲ್ಲಿ ಜಿಲ್ಲೆಯ ಯಾವುದಾದರೂ ಪ್ರಮುಖ ವೃತ್ತಕ್ಕೆ ‘ದೇವರ ದಾಸಿಮಯ್ಯ’ ಹೆಸರು ಇಡಬೇಕು ಎಂದು ಮನವಿ ಮಾಡಿದರು.’
ಕೊಡಗು ಜಿಲ್ಲಾ ನೇಕಾರ ಸುಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಟಿ.ಕೆ.ಪಾಂಡುರಂಗ ಅವರು ಮಾತನಾಡಿ ರೈತ, ನೇಕಾರ, ಸೈನಿಕರನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ನೇಕಾರಿಕ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು. ಜಿಲ್ಲೆಯ ಶಿರಂಗಾದಲ್ಲಿ ಇದ್ದ ಕೈಮಗ್ಗ ಘಟಕ ಮುಚ್ಚಿ ಹೋಗಿದೆ. ಇದರ ಪುನಃಶ್ಚೇತನಕ್ಕೆ ಮುಂದಾಗಬೇಕಿದೆ ಎಂದು ಕೋರಿದರು.
ನಿವೃತ್ತ ದೈಹಿಕ ಶಿಕ್ಷಕರಾದ ಗಣೇಶ್ ಅವರು ಮಾತನಾಡಿ ದೇವರ ದಾಸಿಮಯ್ಯ ಅವರು ಮಾತನಾಡಿದರು. ಸಮಾಜದ ಪ್ರಮುಖರಾದ ಭಾರತಿ ರಮೇಶ್, ಗಜಾನನ, ಪ್ರೇಮ ಕುಮಾರ, ರಮೇಶ್, ರಾಜೇಶ್, ಜಗದೀಶ್, ಬಾಲಣ್ಣ, ಪ್ರಕಾಶ್, ಸುಲೋಚನಾ ಇತರರು ಇದ್ದರು.
ಭಾರತೀ ರಮೇಶ್ ಮತ್ತು ತಂಡದವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ಸ್ವಾಗತಿಸಿದರು. ನಿವೃತ್ತ ದೈಹಿಕ ಶಿಕ್ಷಕರಾದ ಗಣೇಶ್ ನಿರೂಪಿಸಿದರು. ಚಿನ್ನಸ್ವಾಮಿ ವಂದಿಸಿದರು.









