ಸುಂಟಿಕೊಪ್ಪ ಮಾ.27: ಕಣ್ಣೂರಿನ ಋಷಿದೇವ್ ಪ್ರತಿಷ್ಠಾನದ ಮುಖ್ಯಸ್ಥರಾದ ಪರಮಪೂಜ್ಯನೀಯ ಸದ್ಗುರು ಶ್ರೀ ನರೇಂದ್ರನ್ ಜೀ ಅವರ ಉಪಸ್ಥಿತಿಯಲ್ಲಿ ಯಾಗ ಮತ್ತು ಹೋಮಗಳ ಪ್ರಾಮುಖ್ಯತೆ ಮುಂದಿನ ಜನಾಂಗಕ್ಕೆ ನಮ್ಮ ಜವಬ್ಧಾರಿ ಏನು ಎಂಬುದರ ಕುರಿತು ಆಧ್ಯಾತ್ಮಿಕ ಸಮಾಲೋಚನೆ ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
“ಯಾಗ ಮತ್ತು ಹೋಮಗಳು” ಹೇಗೆ ಮನುಷ್ಯಜನಾಂಗ ಪರಿಸರದ ಮೇಲೆ ಪ್ರಭಾವ ಬೀರುತ್ತವೆ ಎಂಬುದರ ಕುರಿತು ಆಮೇರಿಕದ ವಿಜ್ಞಾನಿ ಪ್ರಸ್ತುತ ಬೆಂಗಳೂರಿನಲ್ಲಿರುವ ಡಾ.ಕೃಷ್ಣ ಮಾದಪ್ಪ ಉಪನ್ಯಾಸ ನೀಡಿದರು. ಪಂಚಭೂತಗಳಿoದ ಈ ವಿಶ್ವ ಕಾರ್ಯಾಚರಿಸುತ್ತಿದ್ದು, ಸತ್ವ, ರಾಜಸ ತಮೋಗುಣಗಳ ಏರಿಳಿತದಿಂದ ಪ್ರಸ್ತುತ ವಿಶ್ವ ಮತ್ತು ಸಮಾಜ, ಸಂಘರ್ಷವiಯ ವಾತಾವರಣದಿಂದ ಕೂಡಿದೆ ಎಂದು ಅವರು ಹೇಳಿದರು. ಭೂಮಿ ಮತ್ತು ನೀರು ನಮ್ಮ ಮುಂದಿರುವ ಸವಾಲುಗಳಾಗಿದ್ದು, ಶುದ್ಧ ಭೂಮಿ ಮತ್ತು ನೀರಿನ ಅವಶ್ಯಕತೆಯನ್ನು ನಾವು ಅರಿಯಬೇಕಾಗಿದೆ. ವೇದ ಉಪನಿಶತ್ತುಗಳಲ್ಲಿ ಹೇಳಲಾದ ಸಮಚಿತ್ತ ಮತ್ತು ಸಮಭಾವದ ಬದುಕು ನಮ್ಮ ಮುಂದಿನ ಜನಾಂಗಕ್ಕೆ ನಾವು ಕಲಿಸಬೇಕಾಗಿದೆ ಎಂದು ಕೃಷ್ಣ ಮಾದಪ್ಪ ಸೋದಾಹರಣವಾಗಿ ವಿವರಿಸಿದರು.
“ಗುರುತ್ವಂ” ಎಂಬ ವಿಷಯದ ಮೇಲೆ ಬೆಂಗಳೂರಿನ ಆದ್ಯಾತ್ಮಿಕ ಚಿಂತಕಿ ಶಾರದ ಶ್ರೀಧರ್ ಉಪನ್ಯಾಸ ನೀಡಿ ಜೀವನದಲ್ಲಿ ಗುರು, ದೇವರು ಸಾಧಕನ ನಡುವೆ ಸೇತುವೆಯಂತೆ ಕೆಲಸ ನಿರ್ವಹಿಸುತ್ತಾನೆ. ಜೀವನದ ಮೊದಲ ಐದು ವರ್ಷಗಳಲ್ಲಿ ತಾಯಿ, ನಂತರದ 2-3 ವರ್ಷಗಳು ತಂದೆ ಹಾಗೂ ಜೀವನದ ಉದ್ದಕ್ಕೂ ವಿವಿಧ ಹಂತಗಳಲ್ಲಿ ವಿವಿಧ ಗುರುಗಳು ನಮ್ಮ ಜೀವನವನ್ನು ರೂಪಿಸುತ್ತಾರೆ. ವೇದ, ಉಪನಿಷತುಗಳು, ಪದ್ಧತಿ ಪರಂಪರೆಗಳು, ನಮ್ಮ ಜೀವನದಲ್ಲಿ ಎಷ್ಟು ಅವಶ್ಯಕ ಎಂಬುದನ್ನು ಅವರು ಹೃದಯಸ್ಪರ್ಶಿಯಾಗಿ ವಿವರಿಸಿದರು. ಪ್ರತಿಯೊಬ್ಬರೂ ತಮಗೆ ತಾವೇ ಗುರುವಾಗಿ ಸಾಧಕರಾಗಿ ಪರಬ್ರಹ್ಮವನ್ನು ಅರಿಯುವಲ್ಲಿ ಶ್ರಮಿಸಬೇಕೆಂದು ಕರೆ ನೀಡಿದರು.
“ಪ್ರತಿಯೊಂದು ಶಕ್ತಿಯ ಸ್ವರೂಪ” ಎಂಬ ವಿಷಯದ ಮೇಲೆ ಋಷಿದೇವ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಬಾಬು ಕೇಶವನ್ ಉಪನ್ಯಾಸ ನೀಡಿ ಹೇಗೆ ಮಹಾಭಾರತ, ರಾಮಾಯಾಣ ವೇದ ಮತ್ತು ಉಪನಿಷತ್ತುಗಳಲ್ಲಿ ಹೇಳಲಾದ ಮಹಾವಾಕ್ಯಗಳನ್ನು ಸಾಧನೆ ಮತ್ತು ಅನುಭವದ ಹಿನ್ನಲೆಯಲ್ಲಿ ನಮ್ಮದಾಗಿಸಿಕೊಂಡು, ಬದುಕಿನಲ್ಲಿ ಪರಬ್ರಹ್ಮವನ್ನು ಅರಿಯುವುದು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಆಶೀರ್ವಚನ ನೀಡಿದ ಪರಮಪೂಜ್ಯನೀಯ ಸದ್ಗುರು ಋಷಿದೇವ್ ಶ್ರೀ ನರೇಂದ್ರನ್ ಜೀ ಅವರು ಯಜ್ಞ ಯಾಗಾದಿಗಳು ಜೀವನಕ್ಕೆ ಮಾತ್ರವಲ್ಲದೆ, ಪರಿಸರ ಬ್ರಹ್ಮಾಂಡದ ಮೇಲೆ ಯಾವ ರೀತಿ ಧನಾತ್ಮಕ ಶಕ್ತಿಯನ್ನು ತುಂಬಿ, ಈ ಪ್ರಪಂಚವನ್ನು ನಡೆಸುತ್ತಿರುವ ಅಗೋಚರ ಶಕ್ತಿಯೊಂದಿಗೆ ನಮ್ಮನ್ನು ನಾವು ಸಂಯೋಜನೆಗೊಳಿಸಿಕೊಳ್ಳಲು ಎಷ್ಟು ಸಹಾಯಕಾರಿ ಎಂಬುದನ್ನು ವಿವರಿಸಿದರು.
ಕಾರ್ಯಕ್ರಮದ ಮೊದಲಿಗೆ ಋಷಿದೇವ್ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಲಾಯಿತು. ಋಷಿದೇವ್ ಅವರು ಶಾರದ ಶ್ರೀಧರ್ ಮತ್ತು ಸಂಗಡಿಗರ ಮಂತ್ರ ಪಠಣದ ನಡುವೆ ಜ್ಯೋತಿ ಬೆಳಗಿದರು. ಸೀತಾ ಅಪ್ಪಯ್ಯ ಪ್ರಾರ್ಥಿಸಿ, ಸ್ವಾತಿ ಮಂದಣ್ಣ ಸ್ವಾಗತಿಸಿ, ಕಾರ್ಯಪ್ಪ ಅವರು ಕಾರ್ಯಕ್ರಮ ನಿರ್ವಹಿಸಿ, ಕೊನೆಯಲ್ಲಿ ವಂದಿಸಿದರು.











