ಮಡಿಕೇರಿ ಮಾ.27 : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಕಟ್ಟಡ ಕಾರ್ಮಿಕರು ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಸರಕಾರ ಹಾಗೂ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಸಂಘದ ಜಿಲ್ಲಾಧ್ಯಕ್ಷ ಎ.ಸಿ.ಸಾಬು ಮಾತನಾಡಿ, ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಸಂಘಟನೆಯಿಂದ ಹಲವು ಬಾರಿ ಕಾರ್ಮಿಕ ಇಲಾಖೆಯ ಗಮನ ಸೆಳೆಯಲಾಗಿದ್ದರೂ ಇಲ್ಲಿಯ ವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಆದರೆ ಅನಾವಶ್ಯಕವಾದ ಹೊಸ ಸಮಸ್ಯೆಗಳನ್ನು ಕಲ್ಯಾಣ ಮಂಡಳಿಗೆ ಹೊರೆಯಾಗುವ ರೀತಿಯಲ್ಲಿ ಘೋಷಣೆ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.
ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ಸ್ವೀಕರಗೊಳ್ಳುತ್ತಿರುವ ಶೈಕ್ಷಣಿಕ ಸಹಾಯಧನ ಅರ್ಜಿಯಲ್ಲಿ ಕೆಲವು ಲೋಪದೋಷಗಳಿವೆ. ಇದರಿಂದ ತಂತ್ರಾಂಶದಲ್ಲಿ ಕೆಲ ಬದಲಾವಣೆ ಮಾಡಬೇಕು, ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ ತ್ವರಿತವಾಗಿ ಹಣ ವರ್ಗಾವಣೆ ಮಾಡಬೇಕು, ಆರೋಗ್ಯ ಸಂಜೀವಿನಿ ಜಾರಿಗೊಳಿಸಬೇಕು, ಕಾರ್ಮಿಕ ಅರ್ಜಿ ಸಲ್ಲಿಕೆಗೆ ಇರುವ ನೂತನ ತಂತ್ರಾಂಶದ ಕುರಿತು ತರಬೇತಿ ನೀಡಬೇಕು, ಕಲ್ಯಾಣ ಮಂಡಳಿಯಿಂದ ಆರಂಭಗೊಳ್ಳಿಸಲು ಉದ್ದೇಶಿಸಿರುವ ಶಿಶು ವಿಹಾರಗಳನ್ನು ರದ್ದುಗೊಳಿಸಬೇಕು, ನೈಜ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಲ್ಲಿ ಪ್ರಾತಿನಿಧ್ಯ ದೊರೆಯಬೇಕು, ಅರ್ಜಿಗಳ ವಿಲೇವಾರಿ ವಿಳಂಬವಾಗದಂತೆ ಕ್ರಮವಹಿಸಬೇಕು, ಕಾರ್ಮಿಕ ಇಲಾಖೆಯಲ್ಲಿರುವ ಹುದ್ದೆಗಳನ್ನು ಶೀಘ್ರ ಭರ್ತಿಗೊಳಿಸಬೇಕು, ಮನೆ ನಿರ್ಮಾಣಕ್ಕೆ ರೂ. 5 ಲಕ್ಷ ಸಹಾಯಧನ ಜಾರಿ ಮಾಡಲು ಕ್ರಮವಹಿಸಬೇಕು, ಕಾರ್ಮಿಕರಿಗೆ ನೀರುವ ರೇಷನ್, ಟೂಲ್, ಸುರಕ್ಷಾ ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಲಕ್ಷಾಂತರ ಕಾರ್ಮಿಕರು ಹಾಗೂ ಅವರ ಅವಲಂಬಿತ ಬದುಕು ಹಾಗೂ ಭವಿಷ್ಯದ ದೃಷ್ಟಿಯಿಂದ ಈ ಬೇಡಿಕೆಗಳನ್ನು ತುರ್ತಾಗಿ ಇತ್ಯರ್ಥಗೊಳಿಸುವಂತೆ ಮನವಿ ಮಾಡಿದರು.
ಕಾರ್ಯದರ್ಶಿ ಕೆ.ಎಸ್.ರತೀಶ್, ಖಜಾಂಚಿ ಹಮೀದ್, ಉಪ ಕಾರ್ಯದರ್ಶಿಗಳಾದ ಎಸ್.ರೂಪ, ಕೆ.ಕೆ.ಹರಿದಾಸ್ ಹಾಗೂ ಇತರ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










