ಮಡಿಕೇರಿ ಮಾ.28 : ಕೊಡಗು ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಸ್ಮಶಾನ ಭೂಮಿ ಅಗತ್ಯ ಇದ್ದಲ್ಲಿ ಕೂಡಲೇ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರ್ ಕಚೇರಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ತಿಳಿಸಿದ್ದಾರೆ.
ಹಾಗೆಯೇ ಸ್ಮಶಾನ ಭೂಮಿ ಒತ್ತುವರಿಯಾಗಿದ್ದಲ್ಲಿ ಸಂಬಂಧಪಟ್ಟ ತಾಲ್ಲೂಕು ಕಚೇರಿಗೆ ಮಾಹಿತಿ ನೀಡಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ.
ಜಿಲ್ಲೆಯ ಹಲವು ಗ್ರಾಮಗಳಿಗೆ ಈಗಾಗಲೇ ಸ್ಮಶಾನ ಭೂಮಿ ಕಾಯ್ದಿರಿಸಲಾಗಿದೆ. ಯಾವುದಾದರೂ ಗ್ರಾಮಕ್ಕೆ ಸ್ಮಶಾನ ಭೂಮಿ ಒದಗಿಸಲು ಬಾಕಿ ಇದ್ದಲ್ಲಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸುವಂತಾಗಬೇಕು. ಈಗಾಗಲೇ ಜಾಗ ಕಾಯ್ದಿರಿಸಿದ ಗ್ರಾಮಗಳ ಸ್ಮಶಾನ ಭೂಮಿಯ ಪಹಣಿ ಸೇರಿದಂತೆ ಇತರೆ ದಾಖಲೆಗಳು ಲಭ್ಯವಿದ್ದು, ಜಮೀನು ಲಭ್ಯವಿರುವ ಕಡೆ ಸ್ಮಶಾನಕ್ಕೆ ಜಮೀನು ಕಾಯ್ದ್ದಿರಿಸಲಾಗುತ್ತದೆ ಎಂದರು.
ರಾಜ್ಯ ಉಚ್ಛ ನ್ಯಾಯಾಲಯವು ಮಾ.16 ರಂದು ನಡೆದ ವಿಚಾರಣೆಯಲ್ಲಿ ರಾಜ್ಯದಲ್ಲಿನ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ಮಶಾನ ಭೂಮಿಯ ಅಗತ್ಯತೆ ಬಗ್ಗೆ ರಾಜ್ಯದ ಎಲ್ಲಾ ಗ್ರಾಮದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಸ್ಮಶಾನ ಭೂಮಿಯ ಅವಶ್ಯಕತೆ ಬಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಹಾಗೂ ಇರುವ ಸ್ಮಶಾನ ಭೂಮಿ ಒತ್ತುವರಿಯಾಗಿದ್ದಲ್ಲಿ ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿ ಅವರು ಅಹವಾಲು ಸ್ವೀಕರಿಸಿ ಕ್ರಮಕೈಗೊಂಡು ಮಾರ್ಚ್, 31 ರೊಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದ್ದು, ಆ ನಿಟ್ಟಿನಲ್ಲಿ ಸ್ಮಶಾನ ಭೂಮಿ ಅಗತ್ಯ ಮಾಹಿತಿ ಒದಗಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಕೋರಿದ್ದಾರೆ.









