ಮಡಿಕೇರಿ ಮಾ.28 : ಪ್ರಕೃತಿ ಪ್ರಿಯರ ಅಚ್ಚುಮೆಚ್ಚಿನ ಪ್ರವಾಸಿತಾಣ ಮಡಿಕೇರಿಯ ಅಬ್ಬಿ ಜಲಪಾತ ವ್ಯಾಪ್ತಿಯಲ್ಲಿ ಪ್ರವಾಸಿಗರ ಹಾಗೂ ವಾಹನ ಚಾಲಕರುಗಳ ಸುರಕ್ಷತೆಯ ದೃಷ್ಟಿಯಿಂದ ಉಪ ಪೊಲೀಸ್ ಠಾಣೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಕೊಡಗು ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಕೊರವೇ ಅಧ್ಯಕ್ಷ ಅಚ್ಚಾಂಡೀರ ಪವನ್ ಪೆಮ್ಮಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರನ್ನು ಭೇಟಿಯಾದ ಸಂಘಟನೆಯ ಪದಾಧಿಕಾರಿಗಳು ಹಾಗೂ ಮಡಿಕೇರಿ ನಗರ ಆಟೋ ಚಾಲಕರು ಉಪ ಪೊಲೀಸ್ ಠಾಣೆಯ ಅನಿವಾರ್ಯತೆಯ ಕುರಿತು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಅಬ್ಬಿಫಾಲ್ಸ್ ವ್ಯಾಪ್ತಿಯಲ್ಲಿ ನಗರ ಆಟೋ ಚಾಲಕರ ಮೇಲೆ ದುಷ್ಕರ್ಮಿಗಳು ವಿನಾಕಾರಣ ಹಲ್ಲೆ ಮಾಡುತ್ತಿರುವ ಮತ್ತು ಕೊಲೆ ಬೆದರಿಕೆಯೊಡ್ಡುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಆಟೋ ಚಾಲಕರು ಅಬ್ಬಿಫಾಲ್ಸ್ ಗೆ ಬಾಡಿಗೆ ತೆರಳಲು ಆತಂಕಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಸಿಗರ ಸುರಕ್ಷತೆಯೂ ಇಲ್ಲಿ ಅಗತ್ಯವಾಗಿದೆ ಎಂದು ಪವನ್ ಪೆಮ್ಮಯ್ಯ ಗಮನ ಸೆಳೆದರು.
ಆಟೋ ಚಾಲಕರಿಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ ಅವರು, ಉಪ ಪೊಲೀಸ್ ಠಾಣೆ ವ್ಯವಸ್ಥೆಯಿಂದ ಅನೇಕ ಸಮಸ್ಯೆಗಳು ಬಗೆಹರಿಯಲಿದೆ ಎಂದು ಅಭಿಪ್ರಾಯಪಟ್ಟರು.
ಕೊರವೇ ಜಿಲ್ಲಾ ನಿರ್ದೇಶಕರಾದ ಸುಲೈಮಾನ್, ಪಾಪು ರವಿ, ಮಡಿಕೇರಿ ನಗರಾಧ್ಯಕ್ಷ ಶರತ್, ಕೊರವೇ ಆಟೋ ಯೂನಿಯನ್ ಮುಖಂಡರಾದ ವರ್ಗೀಸ್, ರಫೀಕ್, ಯಕ್ಷಿತ್, ಸುನಿಲ್, ಮಂಜು ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.










