ಮಡಿಕೇರಿ ಮಾ.28 : ಖಾಸಗಿ ಆಸ್ಪತ್ರೆಗಳು ಕೂಡ ತುತು೯ ವೈದ್ಯಕೀಯ ಸೇವೆಯನ್ನು ಎಲ್ಲರಿಗೂ ಉಚಿತವಾಗಿ ನೀಡಬೇಕೆಂದು ರಾಜಸ್ತಾನ ಸಕಾ೯ರವು ಹೊರಡಿಸಿರುವ ಆದೇಶಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಖಾಸಗಿ ಆಸ್ಪತ್ರೆಗಳ ಅಸ್ತಿತ್ವಕ್ಕೆ ಮಾರಕವಾಗಿರುವ ಕಾನೂನನ್ನು ಹಿಂಪಡೆಯುವಂತೆ ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕ ಒತ್ತಾಯಿಸಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಘದ ಪ್ರಮುಖರು ರಾಜಸ್ತಾನ ಸಕಾ೯ರವು ಇತ್ತೀಚೆಗೆ ಕಾನೂನು ಹೊರಡಿಸಿ ಖಾಸಗಿ ಆಸ್ಪತ್ರೆಗಳು ಕೂಡ ತುತು೯ ವೈದ್ಯಕೀಯ ಸೇವೆಯನ್ನು ಸಕಾ೯ರಿ ಆಸ್ಪತ್ರೆಗಳಂತೆ ಉಚಿತವಾಗಿ ರೋಗಿಗಳಿಗೆ ನೀಡಬೇಕೆಂದು ಸೂಚಿಸಿದೆ. ಇದರಿಂದ ಖಾಸಗಿ ಆಸ್ಪತ್ರೆಗಳ ಅಸ್ತಿತ್ವಕ್ಕೇ ಧಕ್ಕೆ ಬಂದಂತಾಗಿದೆ. ಯಾವುದೆಲ್ಲಾ ತುತು೯ ಆರೋಗ್ಯ ಸೇವೆಯಡಿ ಬರುತ್ತದೆ ಎಂಬ ಸ್ಪಷ್ಟತೆಯೂ ಇಲ್ಲವಾಗಿದೆ. ಹೀಗಿರುವಾಗ ಖಾಸಗಿ ಆಸ್ಪತ್ರೆಗಳ ಸ್ಥಾಪನೆಯ ಉದ್ದೇಶವೇ ಈ ಕಾಯಿದೆಯಿಂದ ವಿಫಲವಾಗಲಿದೆ. ರಾಜ್ಯ ಸಕಾ೯ರವೊಂದು ಈ ರೀತಿಯ ಕಾಯಿದೆ ಮೂಲಕ ಖಾಸಗಿ ಆಸ್ಪತ್ರೆಗಳ ಮೇಲೆ ಹಿಡಿತ ಸ್ಥಾಪಿಸಲು ಮುಂದಾಗಿರುವುದು ದುರದೖಷ್ಟಕರ. ಖಾಸಗಿ ಆಸ್ಪತ್ರೆಗಳ ಆರೋಗ್ಯಕರ ವ್ಯವಸ್ಥೆಯೇ ಇದರಿಂದ ಸಮಸ್ಯೆಗೊಳಪಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಖಾಸಗಿ ಆಸ್ಪತ್ರೆಗಳು ಮಹತ್ವದ ಪಾತ್ರ ವಹಿಸಿದೆ. ಹೀಗಿರುವಾಗ ಸಕಾ೯ರವೊಂದು ಖಾಸಗಿ ಆಸ್ಪತ್ರೆಗಳ ನಿವ೯ಹಣೆಗೆ ಧಕ್ಕೆಯಾಗುವಂತೆ ಹೊಸ ರೀತಿಯ ಕಾನೂನು ಜಾರಿಗೊಳಿಸಿರುವುದು ಸರಿಯಾದ ಕ್ರಮವಲ್ಲ, ಕೂಡಲೇ ಈ ಕಾನೂನನ್ನು ಹಿಂಪಡೆಯಬೇಕೆಂದು ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ. ರಾಜಸ್ತಾನದಲ್ಲಿ ಈ ಕಾನೂನನ್ನು ಜಾರಿಗೊಳಿಸಲು ಸಮ್ಮತಿಸದ ಖಾಸಗಿ ಆಸ್ಪತ್ರೆಗಳ ವೈದ್ಯರ ವಿರುದ್ದ ಪೊಲೀಸ್ ಕ್ರಮ ಕೈಗೊಂಡಿರುವುದನ್ನೂ ಸಂಘವು ಖಂಡಿಸಿದೆ.
ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಅಧ್ಯಕ್ಷ ಡಾ.ಶ್ಯಾಮ್ ಅಪ್ಪಣ್ಣ,ಗೌರವ ಕಾಯ೯ದಶಿ೯ ಡಾ.ಸಿ.ಆರ್.ಪ್ರಶಾಂತ್, ಹಿರಿಯ ಸದಸ್ಯರಾದ ಡಾ.ಮೋಹನ್ ಅಪ್ಪಾಜಿ, ಡಾ.ಎಂ.ಎ.ದೇವಯ್ಯ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.
ರಾಜಸ್ತಾನ ಸಕಾ೯ರದ ಹೊಸ ಕಾಯಿದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.










