ಮಡಿಕೇರಿ ಮಾ.28 : ಹಾಕಿ ಇಂಡಿಯಾ ವತಿಯಿಂದ ತಮಿಳುನಾಡಿನ ರಾಮನಾಥಪುರದಲ್ಲಿ ಜರುಗಿದ ಪ್ರಥಮ ಜೂನಿಯರ್ ಮೆನ್ ಹಾಗೂ ಜೂನಿಯರ್ ವುಮೆನ್ ದಕ್ಷಿಣ ವಲಯ ಹಾಕಿ ಚಾಂಪಿಯನ್ ಶಿಪ್‍ನಲ್ಲಿ ಹಾಕಿ ಕರ್ನಾಟಕ ಜೂನಿಯರ್ ಮಹಿಳಾ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಫೈನಲ್‍ನಲ್ಲಿ ಮುಗ್ಗರಿಸಿದ ಪುರುಷರ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಹಾಕಿ ಕರ್ನಾಟಕ ಪುರುಷರ ತಂಡದಲ್ಲಿ ಕೊಡಗಿನ 9 ಕ್ರೀಡಾಪಟುಗಳು ಹಾಗೂ ಜೂನಿಯರ್ ಮಹಿಳಾ ತಂಡದಲ್ಲಿ ಕೂಡಗಿನ 11 ಆಟಗಾರ್ತಿಯರು ತಂಡವನ್ನು ಪ್ರತಿನಿಧಿಸಿರುವುದು ವಿಶೇಷವಾಗಿದ್ದು, ಜಿಲ್ಲೆಗೆ ಹಿರಿಮೆಯಾಗಿದೆ.
ಜೂನಿಯರ್ ಮಹಿಳಾ ತಂಡ ಫೈನಲ್‍ನಲ್ಲಿ 3-1 ಗೋಲಿನಿಂದ ತಮಿಳುನಾಡು ತಂಡವನ್ನು ಸೋಲಿಸಿತು. ಕರ್ನಾಟಕ ಪರ ನಾಯಕಿ ಯಮುನಾ, ಕೊಡಗಿನವರಾದ ಮಾಳೇಟಿರ ದಿಶಾ ಪೊನ್ನಮ್ಮ ಹಾಗೂ ಎಂ.ದಿಶಾ ಗೋಲು ಗಳಿಸಿದರು.
ತಂಡದಲ್ಲಿ ಕೊಡಗಿನವರಾದ ಮಡಿಕೇರಿ ಹಾಗೂ ಕೂಡಿಗೆ ಶಾಲೆಯ ಪುಣ್ಯ, ದೀಪಿಕಾ, ಎಂ.ದಿಶಾ, ಪಿ.ಡಿ.ಬೊಳ್ಳಮ್ಮ, ಪಿ.ಡಿ.ಶ್ರಾವ್ಯ, ದಿಶಾ ಪೊನ್ನಮ್ಮ, ಪಿ.ಎಸ್.ನಿಧಿ ನೀಲಮ್ಮ, ಮನೀಷ್ ಪೊನ್ನಮ್ಮ, ಅಕ್ಷತಾ, ಯಾಹಿನಿ ಹಾಗೂ ದೇವಿಕಾ ಪಾಲ್ಗೊಂಡಿದ್ದರು.
ಆರಂಭದ ಎಲ್ಲಾ ಪಂದ್ಯ ಗೆದ್ದಿದ್ದ ಪುರುಷರ ತಂಡ ಶೂಟೌಟ್‍ನಲ್ಲಿ ತಮಿಳುನಾಡು ಎದುರು ಸೋಲು ಕಂಡಿತು.
ಪುರುಷರ ತಂಡದಲ್ಲಿ ಕೊಡಗಿನವರಾದ ಚೋಕಿರ ಕುಶಾಲ್ ಬೋಪಯ್ಯ, ಕುಲ್ಲೇಟಿರ ವಚನ್ ಕಾಳಪ್ಪ, ಬಿದ್ದಾಟಂಡ ಅಖಿಲ್ ಅಯ್ಯಪ್ಪ, ಕಂಬೀರಂಡ ಮಾನವ್ ಮೇದಪ್ಪ, ಕಲಿಯಂಡ ಚಂಗಪ್ಪ, ಚೋಯಮಾಡಂಡ ಆಕಾಶ್ ಬಿದ್ದಪ್ಪ, ತೀತಮಾಡ ಯಶಸ್ ಧ್ರುವ ಸೋಮವಾರಪೇಟೆ, ಶ್ರೀಜಿತ್ ಸೋಮವಾರಪೇಟೆ ಇಪಾಲ್ಗೊಂಡಿದ್ದರು.








