ಮಡಿಕೇರಿ ಮಾ.28 : ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದು ರಾಜ್ಯಮಟ್ಟ, ರಾಷ್ಟ್ರ ಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಸಾಬೀತಾಗಿದೆ ಎಂದು ಗೋಣಿಕೊಪ್ಪಲಿನ ಮಹಿಳಾ ಉದ್ಯಮಿ ಎಂ.ಕೆ.ಸಂಧ್ಯಾ ಕಾಮತ್ ನುಡಿದರು.
ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ತಾನು ಸಬಲಳಾಗಬೇಕು ಎನ್ನುವುದರ ಜತೆಗೆ ಅದು ಸಕಾರಾತ್ಮಕವಾಗಿರಬೇಕು ಎನ್ನುವ ಚಿಂತೆಯನ್ನು ಮಾಡಬೇಕಿದೆ. ಗಂಡ-ಹೆಂಡತಿ ಕುಟುಂಬದ ಕಣ್ಣುಗಳಿದ್ದಂತೆ. ಸಬಲರಾಗುವ ನಿಟ್ಟಿನಲ್ಲಿ ಮೇಲು-ಕೀಳು ಭಾವನೆ ಬಾರದಂತೆ ಗಮನಿಸಿಕೊಂಡು ಹೋದಲ್ಲಿ ಕುಟುಂಬ ವ್ಯವಸ್ಥೆಯಲ್ಲಿ ನಾವು ಸಫಲರಾಗಬಹುದು ಮತ್ತು ನೆಮ್ಮದಿಯ ಜೀವನ ಕಾಣಬಹುದು ಎಂದು ಸಲಹೆ ನೀಡಿದರು.
ಇಂದು ನಾವು ಹಲವಾರು ಕೌಟುಂಬಿಕ ಸಮಸ್ಯೆಗಳನ್ನು ವೈಮನಸ್ಸುಗಳನ್ನು, ವಿಚ್ಛೇದನಗಳನ್ನು ಕಾಣುತ್ತಿದ್ದೇವೆ. ಸಕಾರಾತ್ಮಕ ಚಿಂತನೆಯಿಂದ ಇವೆಲ್ಲವನ್ನೂ ಮೀರಿ ನಿಂತು ಹೆಣ್ಣು ಸಬಲಳಾಗಿ ಕೌಟುಂಬಿಕ ವ್ಯವಸ್ಥೆಯನ್ನು ಸರಿ ಮಾಡಿಕೊಂಡು ಹೋಗುವ ನಿಟ್ಟಿನಲ್ಲಿ ಚಿಂತನೆಯ ಅಗತ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ, ದೃಢಸಂಕಲ್ಪ ಮತ್ತು ನಿಸ್ವಾರ್ಥ ಸೇವೆ ವ್ಯಕ್ತಿಯನ್ನು ಸಾಧನೆಯಡೆಗೆ ಕರೆದುಕೊಂಡು ಹೋಗುತ್ತದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶೋಭಾ ಸುಬ್ಬಯ್ಯ ಮಾತನಾಡಿ, ಮಹಿಳೆ ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಬೇಕು. ಪ್ರತಿಯೊಂದು ಅವಕಾಶವನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಮೇಲೆ ಏರಬೇಕು, ಸಾಧನೆಯ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ರೇವತಿ ರಮೇಶ್ ಮತ್ತು ಲಲಿತ ಕಟ್ರತನ ತಂಡದಿಂದ ಕಿರು ನಾಟಕ ಪ್ರದರ್ಶನಗೊಂಡಿತ್ತು. ಅಂಬೆಕಲ್ ಸುಶೀಲ ಕುಶಾಲಪ್ಪ, ಕಡ್ಲೆರ ತುಳಸಿ ಮೋಹನ್ ಜಾನಪದ ಗೀತೆ ಹಾಡಿದರು. ಸುಂದರಿ ಮಾಚಯ್ಯ ಪದ್ಮಶ್ರೀ ರಾಣಿ ಮಾಚಯ್ಯ ಅವರ ಕುರಿತು ತಾವು ರಚಿಸಿದ ಕವನವನ್ನು ವಾಚಿಸಿದರು.
ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಉಪಾಧ್ಯಕ್ಷೆ ಬೇಬಿ ಚಿಣ್ಣಪ್ಪ, ಕಾರ್ಯದರ್ಶಿ ರೇವತಿ ರಮೇಶ್, ಕೋಶಾಧಿಕಾರಿ ಲಲಿತ ತಿಮ್ಮಯ್ಯ, ಮಾಜಿ ಅಧ್ಯಕ್ಷೆ ಕಸ್ತೂರಿ ಗೋವಿಂದಮಯ್ಯ, ಸದಸ್ಯರುಗಳಾದ ಚೊಕ್ಕಾಡಿ ಪ್ರೇಮ ರಾಘವಯ್ಯ, ತೆನ್ನಿರ ರಾಧಾ ಪೊನ್ನಪ್ಪ, ಸುನೀತಾ ಪ್ರೀತು, ಅರುಣಾ ಮೈಸೂರು, ಕೊಡಗು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಹಾಜರಿದ್ದರು.








