ಮಡಿಕೇರಿ ಮಾ.28 : ಕೊಡಗು ಗೌಡ ವಿದ್ಯಾ ಸಂಘದ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ಇಂದು ನಡೆಯಿತು.
ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ ಅವರಿಗೆ ನಿಕಟಪೂರ್ವ ಅಧ್ಯಕ್ಷ ಹೊಸೂರ್ ರಮೇಶ್ ಜೋಯಪ್ಪ ಎಲ್ಲರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಅಂಬೇಕಲ್ ನವೀನ್ ಕುಶಾಲಪ್ಪ, ಐದು ವರ್ಷದ ಆಡಳಿತಾವಧಿಯಲ್ಲಿ ವಿದ್ಯಾಸಂಘವನ್ನು ಅಭಿವೃದ್ಧಿಪಡಿಸಿ ಮಾದರಿ ಸಂಸ್ಥೆಯನ್ನಾಗಿ ಬೆಳೆಸಲು ಸರ್ವರು ಸಹಕರಿಸಬೇಕೆಂದು ಮನವಿ ಮಾಡಿದರು.
ನಿಕಟಪೂರ್ವ ಅಧ್ಯಕ್ಷ ಹೊಸೂರ್ ರಮೇಶ್ ಜೋಯಪ್ಪ ಮಾತನಾಡಿ ಕಳೆದ 23 ವರ್ಷಗಳಿಂದ ಸಂಘದ ಅಭಿವೃದ್ಧಿಗಾಗಿ ಶಕ್ತಿಮೀರಿ ಶ್ರಮ ವಹಿಸಿದ್ದೇನೆ. ಜನಾಂಗ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಾಧಕರನ್ನು ಗುರುತಿಸುವ ಕೆಲಸ ಮಾಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ನಿಕಟಪೂರ್ವ ಕಾರ್ಯದರ್ಶಿ ಕೊಟ್ಟಕೇರಿನ ದಯಾನಂದ ಕಳೆದ ಮಹಾಸಭೆಯ ವರದಿ ಹಾಗೂ ಖಜಾಂಚಿ ಕಟ್ಟೆಮನೆ ಸೋನಾಜಿತ್ ಲೆಕ್ಕಪತ್ರ ಮಂಡಿಸಿದರು.
ನೂತನ ಕಾರ್ಯದರ್ಶಿ ಪೇರಿಯನ ಉದಯ, ಸಹ ಕಾರ್ಯದರ್ಶಿ ತಳೂರು ದಿನೇಶ್, ಕೋಶಾಧಿಕಾರಿ ಕಾಳೇರಮ್ಮನ ಲತಾ, ನಿರ್ದೇಶಕರುಗಳಾದ ಸೂದನ ಈರಪ್ಪ, ಚೊಕ್ಕಾಡಿ ಅಪ್ಪಯ್ಯ, ದೇವಂಗೋಡಿ ಹರ್ಷ, ಮೊಟ್ಟನ ಜ್ಯೋತಿಶಂಕರ್, ಕುಂಬುಗೌಡನ ವಿನೋದ್, ಪರಿಚನ ಸತೀಶ, ತೋಟಂಬೈಲು ಮನೋಹರ, ಕುಂಟಿಕಾನ ಗಣಪತಿ, ಮೂಲೆ ಮಜಲು ಮನೋಜ್, ಮಹಿಳಾ ನಿರ್ದೇಶಕರುಗಳಾದ ಕೆದಂಬಾಡಿ ಕಾಂಚನ, ಪುದಿಯನೆರವನ ರೇವತಿ ರಮೇಶ್, ಪಾಂಡನ ಪುಷ್ಪವೇಣಿ ಹಾಗೂ ವ್ಯವಸ್ಥಾಪಕ ಮತ್ತಾರಿ ರಮೇಶ್ ಹಾಜರಿದ್ದರು. ಉಪಾಧ್ಯಕ್ಷ ಅಮೆ ಸೀತಾರಾಮ ವಂದಿಸಿದರು.









