ಮಡಿಕೇರಿ ಮಾ.28 : ರಾಜ್ಯದ ಸ್ಮಾರಕಗಳನ್ನು ಸಂರಕ್ಷಿಸುವುದು ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ‘ಸ್ಮಾರಕ ದತ್ತು ಯೋಜನೆ’ಯನ್ನು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಆ ನಿಟ್ಟಿನಲ್ಲಿ ಸ್ಮಾರಕ ದತ್ತು ಪಡೆಯಲು ಮುಂದೆ ಬರುವವರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ಎ.ದೇವರಾಜ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ದತ್ತು ಯೋಜನೆಯಡಿ ಆಸಕ್ತ ಸಂಘ ಸಂಸ್ಥೆಗಳು, ಕಂಪನಿಗಳು, ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ(ಸಿಎಸ್‍ಆರ್) ಕಾರ್ಯಕ್ರಮದಲ್ಲಿ ಸ್ಮಾರಕಗಳನ್ನು ದತ್ತು ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸುವಂತಾಗಬೇಕು ಎಂದು ಅವರು ಕೋರಿದರು.
ಸ್ಮಾರಕಗಳನ್ನು ದತ್ತು ಪಡೆಯುವ ಸಂಘ ಸಂಸ್ಥೆಯನ್ನು ‘ಸ್ಮಾರಕ ಮಿತ್ರ’ ಎಂದು ಕರೆಯಲಾಗುತ್ತದೆ. ಹಾಗೆಯೇ ಮೂಲಭೂತ ಪ್ರವಾಸಿ ಸೌಕರ್ಯಗಳು, ಸುಧಾರಿತ ಪ್ರವಾಸಿ ಸೌಕರ್ಯಗಳು, ಸಂರಕ್ಷಣಾ ಕಾರ್ಯಗಳನ್ನು ಗುರುತಿಸಿದೆ. ಆ ದಿಸೆಯಲ್ಲಿ ಸ್ಮಾರಕ ಮಿತ್ರವು ನೋಡಲ್ ಇಲಾಖೆಯೊಂದಿಗೆ ಸಮಾಲೋಚಿಸಿ ಸ್ಮಾರಕ ಅಭಿವೃದ್ಧಿಗೆ ಮುಂದಾಗಲಿದೆ ಎಂದು ಎ.ದೇವರಾಜ ಅವರು ವಿವರಿಸಿದರು.
ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಯ 53 ಸ್ಮಾರಕಗಳನ್ನು ದತ್ತು ಪಡೆಯಲು ಆಸಕ್ತ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸದ್ಯ ವಿಜಯಪುರದ ತಾಜ್ ಬಾವಡಿ ಸ್ಮಾರಕವನ್ನು ಅಭಿವೃದ್ಧಿ ಪಡಿಸಲು ಮುಂಬೈನ ಸಂಸ್ಥೆಯೊಂದು ಮುಂದೆ ಬಂದಿದೆ. ಹಾಗೆಯೇ ಕೊಪ್ಪಳ ಜಿಲ್ಲೆಯ ಆನೆಗುಂದಿಯ ಗಗನ ಮಹಲ್ ಸ್ಮಾರಕ ನಿರ್ವಹಣೆಗಾಗಿ ರಾಜ್ಯದ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮುಂದೆ ಬಂದಿದೆ ಎಂದು ತಿಳಿಸಿದರು.
ಸ್ಮಾರಕ ಸಂರಕ್ಷಣೆಗೆ ಹಾಗೂ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸುವುದು ಪ್ರಮುಖವಾಗಿದೆ. ಶೌಚಾಲಯ, ಕುಡಿಯುವ ನೀರು, ಅಂತರ್ಜಾಲ ಸಂಪರ್ಕ, ಸಿಸಿಟಿವಿ ಅಳವಡಿಸುವುದು, ಅಗತ್ಯ ಪೀಠೋಪಕರಣಗಳನ್ನು ಇಡುವುದು, ಧ್ವನಿ ಬೆಳಕು ವ್ಯವಸ್ಥೆ ಮಾಡುವುದು ಹೀಗೆ ಹಲವು ರೀತಿಯಲ್ಲಿ ಆಕರ್ಷಣೀಯವಾಗಿ ಸ್ಮಾರಕವನ್ನು ಅಭಿವೃದ್ಧಿ ಜೊತೆಗೆ ನಿರ್ವಹಣೆ ಮಾಡಬೇಕಿದೆ ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ಎ.ದೇವರಾಜ ಅವರು ನುಡಿದರು.
ದತ್ತು ಪಡೆಯಲು ಮುಂದಾಗುವ ಸಂಘ ಸಂಸ್ಥೆಗಳು ದಾಸ್ತಾವೇಜನ್ನು ಪರಿಶೀಲಿಸಿ ಅನುಮೋದನೆ ನೀಡಲು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ‘ಸ್ಮಾರಕ ದತ್ತುಗಾಗಿ ಅಧಿಕಾರ ಸಮಿತಿ’ ಮಾರ್ಗಸೂಚಿ ಅನ್ವಯ ಕಾರ್ಯ ನಿರ್ವಹಿಸಬೇಕಿದೆ ಎಂದು ಅವರು ವಿವರಿಸಿದರು.
ಜಿಲ್ಲಾ ಮಟ್ಟದಲ್ಲಿ ಸಮರ್ಪಕ ಅನುಷ್ಠಾನ ಮತ್ತು ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸ್ಮಾರಕ ಸಮಿತಿ ರಚಿಸಲಾಗುತ್ತದೆ ಎಂದರು.
ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಸ್ಮಾರಕಗಳ ಸಂರಕ್ಷಣೆ, ಅಭಿವೃದ್ಧಿ, ಸ್ಮಾರಕಗಳ ಬಳಿ ಪ್ರವಾಸೋದ್ಯಮ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಿಎಸ್‍ಆರ್ ನಿಧಿಯಡಿ ರಾಜ್ಯದ ಕಲೆ, ಸಂಸ್ಕøತಿ, ಪರಂಪರೆ ಉಳಿಸಿ ಬೆಳೆಸಲು ದತ್ತು ಯೋಜನೆ ಸಹಕಾರಿಯಾಗಿದೆ ಎಂದರು.
ರಾಜ್ಯದಲ್ಲಿ 800 ಕ್ಕೂ ಹೆಚ್ಚು ಸಂರಕ್ಷಿತ ಸ್ಮಾರಕಗಳನ್ನು ಗುರುತಿಸಲಾಗಿದೆ. ಅತೀ ಹೆಚ್ಚು ಸಂರಕ್ಷಿತ ಸ್ಮಾರಕಗಳು ಇರುವುದು ರಾಜ್ಯದಲ್ಲಿ ಎಂಬುದು ಹೆಮ್ಮೆಯ ವಿಷಯವಾಗಿದೆ. ಆ ನಿಟ್ಟಿನಲ್ಲಿ ಸ್ಮಾರಕಗಳನ್ನು ಸಂರಕ್ಷಿಸಿ ಮೂಲ ಸೌಕರ್ಯ ಒದಗಿಸುವುದು ದತ್ತು ಯೋಜನೆಯ ಉದ್ದೇಶವಾಗಿದೆ ಎಂದರು.
ದತ್ತು ಪಡೆಯಲು 5 ವರ್ಷಗಳ ಕಾಲ ನಿರ್ವಹಣೆ, ಅಭಿವೃದ್ಧಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಪುರಾತತ್ವ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ರಾಜರ ಗದ್ದುಗೆ, ನಾಲ್ಕುನಾಡು ಅರಮನೆ, ಹಾಗೆಯೇ ಅರಪಟ್ಟು ಈಶ್ವರ ದೇವಾಲಯವನ್ನು ಸ್ಮಾರಕ ಗುರುತಿಸಲಾಗಿದ್ದು, ಆಸಕ್ತಿ ಇರುವವರು ಇವುಗಳನ್ನು ದತ್ತು ಪಡೆದು ಜೀರ್ಣೋದ್ಧಾರ/ನಿರ್ವಹಣೆ ಮಾಡಬಹುದಾಗಿದೆ ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ಎ.ದೇವರಾಜ ಅವರು ಹೇಳಿದರು.
ಹೆಚ್ಚಿನ ಮಾಹಿತಿಗೆ ಪುರಾತತ್ವ ಇಲಾಖೆಯ ವೆಬ್‍ಸೈಟ್ http://archaeology.karnataka.gov.in ನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಕ್ಯೂರೇಟರ್ ರೇಖಾ, ಇತರರು ಇದ್ದರು.