ನಾಪೋಕ್ಲು ಮಾ.29 : ಗ್ರಾಮ ಪಂಚಾಯಿತಿಯ 2023 -24ನೇ ಸಾಲಿನ ಹರಾಜು ಪ್ರಕ್ರಿಯೆಯು ಪಂಚಾಯತಿ ಅಧ್ಯಕ್ಷರಾದ ಪಾರ್ವತಿ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾ.ಪಂ ಸಭಾಂಗಣದಲ್ಲಿ ನಡೆದ ಹರಾಜಿನ ಮೊದಲ ಭಾಗವಾದ ಸಂತೆ ಸುಂಕ ಎತ್ತಾವಳಿ ಮತ್ತು ವಾಹನ ಸುಂಕ ಎತ್ತಾವಳಿ ಸರ್ಕಾರದ ಬಿಡ್ದುವರೆಗು ಬಾರದೆ ಇರುವುದರಿಂದ ಇದನ್ನು ಮುಂದೂಡಲಾಯಿತು.
ಹಸಿಮೀನು ಮಾರಾಟಕ್ಕೆ ಸರ್ಕಾರಿ ಬಿಡ್ಡು 2,76000ಕ್ಕೆ ನಡೆದ ಎರಡು ಲೈಸನ್ಸ್ ಮೂರು ಜನ ಬಿಡ್ಡುದಾರರ ಮಧ್ಯೆ ನಡೆದ ಜಿದ್ದಾಜಿದ್ದಿನ ಪೈಪೋಟಿಯಿಂದ ಲೈಸೆನ್ಸ್ ಒಂದಕ್ಕೆ ಬರೋಬ್ಬರಿ 10 ಲಕ್ಷದ 800 ರೂ.ಗಳಿಗೆ ಹೋದರೆ, ಹಸಿಮೀನು ಮಾರಾಟದ ಮತ್ತೊಂದು ಲೈಸನ್ಸ್ ಬರೋಬ್ಬರಿ 13 ಲಕ್ಷದ 25ಸಾವಿರಕ್ಕೆ ಹರಾಜು ಮಾಡಲಾಯಿತು.
ಕುರಿಮಾಂಸ ಎರಡು ಲೈಸನ್ಸ್ ನಲ್ಲಿ ಒಂದು 1,39200ಕ್ಕೆಹರಾಜಾದರೆ ಮತ್ತೊಂದು 2,50,100ಕ್ಕೆ ಹರಾಜು ಮಾಡಲಾಯಿತು. ಅದರಂತೆ ಕೋಳಿ ಮಾಂಸ ಮಳಿಗೆ ಒಂದಕ್ಕೆ 55,100 ರಂತೆ ಆರು ಮಳಿಗೆ ಲೈಸೆನ್ಸ್ ಹೋದರೆ, ಹಂದಿಮಾಂಸ ಮಳಿಗೆ ಒಂದು 22,100ಕ್ಕೆ ಹರಾಜು ಮಾಡಲಾಯಿತು.
ಈ ಸಂದರ್ಭ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತ ಹ್ಯಾರಿಸ್ ಪಂಚಾಯತ್ ರಾಜ್ ನಿಯಮದ ಕಲಂ 67ರ ಅನ್ವಯ ಉಪದ್ರಕಾರಿ ಹಾಗೂ ಅಪಾಯಕಾರಿ ವ್ಯಾಪಾರವಾಗಿರುವ ಮೀನು ಮತ್ತು ಮಾಂಸ ಮಾರಾಟದ ಹಕ್ಕು ಸ್ಥಳ ಗುರುತಿಸದೆ ಬಹಿರಂಗರಾಜು ನಡೆಸುವುದು ಪಂಚಾಯತ್ ರಾಜ್ ನಿಯಮದ ವಿರುದ್ಧವಾಗಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದ ಹಾಗೂ ಎಲ್ಲೆಂದರಲ್ಲಿ ವ್ಯಾಪಾರ ಮಾಡುವುದರಿಂದ ಕೆಲವರು ತ್ಯಾಜ್ಯ ವಿಲೇವಾರಿಗೆ ಸ್ಥಳವಿಲ್ಲದೆ ಮೀನು ಮತ್ತು ಮಾಂಸದ ತ್ಯಾಜ್ಯವನ್ನು ಜೀವನದಿ ಕಾವೇರಿಗೆ ಎಸೆಯುತ್ತಿದ್ದು, ಇದರಿಂದ ಜೀವ ಜಲ ಮಲಿನವಾಗುತ್ತಿದೆ ಎಂದು ಆರೋಪಿಸಿದರು.
ಪಂಚಾಯಿತಿ ನಿಯಮಾನಸಾರ ತೆರಿಗೆ ನಿಗದಿ ಹಾಗೂ ತೆರಿಗೆ ವಸೂಲಿ ಮಾಡಿದ್ದಲ್ಲಿ ಸ್ಥಳೀಯ ಸಂಪನ್ಮೂಲ ಕ್ರೂಡೀಕರಣ ಹೆಚ್ಚು ಮಾಡಬಹುದು. ಅದು ಬಿಟ್ಟು ಬಹಿರಂಗ ಹರಾಜು ನಡೆಸಿ ಸ್ಥಳೀಯ ಸಂಪನ್ಮೂಲ ಕ್ರೂಡೀಕರಣಕ್ಕೆ ಮುಂದಾಗಿ ಈ ರೀತಿಯ ಬಹಿರಂಗ ಹರಾಜಿನಿಂದ ಬಿಡ್ದುದಾರರು ಪರಸ್ಪರ ಪ್ರತಿಷ್ಠೆ ಹಾಗೂ ಜಿದ್ದಿಗೆ ಬಿದ್ದು ದೊಡ್ಡ ಮೊತ್ತಗಳಿಗೆ ಮಾರುಕಟ್ಟೆ ಹಾಗೂ ವ್ಯಾಪಾರ ಹಕ್ಕನ್ನು ಪಡೆದುಕೊಂಡವರು ಅನಿವಾರ್ಯ ಕಾರಣದಿಂದ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಇದು ಈ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರ ಮೇಲೆ ಹೊರೆಯಾಗಲಿದೆ ಆದ್ದರಿಂದ ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಪರಸ್ಪರ ಜಿದ್ದಾಜಿದ್ದಿಗೆ ಅವಕಾಶ ಕೊಡದೆ ವ್ಯಾಪಾರಕ್ಕೆ ಇಚ್ಛಿಸುವ ಎಲ್ಲರಿಗೂ ಪರವಾನಾಗಿ ನೀಡುವಂತೆ ಮನವಿ ಮಾಡಿದರು.
ಮತ್ತೋರ್ವ ಬಿಡ್ದುದಾರ ನಾಸಿರ್ ಮಾತನಾಡಿ, ಸುಂಕ ಎತ್ತಾವಳಿ ಹಕ್ಕುದಾರರು ಹಕ್ಕಿನ ಮೊತ್ತದ 18% ಜಿಎಸ್‌ಟಿ ಹಣವನ್ನು ಪಂಚಾಯಿತಿಗೆ ಪಾವತಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಇತರೆ ಬಿಡ್ದುದಾರರು ಧ್ವನಿಗೂಡಿಸಿದರು.
ಬಿಡ್ದುದಾರರ ಮನವಿಗೆ ಒಪ್ಪಿಗೆ ಸೂಚಿಸಿದ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯಿತಿ ಸದಸ್ಯರು ಪಂಚಾಯಿತಿ ಸಭೆ ಸೇರಿ ಪೂರಕವಾಗಿ ಕ್ರಮ ಕೈಗೊಳ್ಳುವುದಾಗಿ ಒಪ್ಪಿಕೊಂಡರು. ಈಗಾಗಲೇ ಬಾಕಿ ಇರುವ ಹಕ್ಕುದಾರಿಕೆಯನ್ನು ಗ್ರಾಮ ಪಂಚಾಯಿತಿ ಸಭೆಯ ನಂತರ ಪ್ರಕಟಿಕಿಸಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷರು ತಿಳಿಸಿದರು.
ಮುಂದಿನ ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿ ಹರಾಜು ಪ್ರಕ್ರಿಯೆ ನಡೆಯದೇ ಇದ್ದಲ್ಲಿ ಕಳೆದ ವರ್ಷದ ಹಕ್ಕುದಾರರಿಗೆ ನೀಡುವ ಕುರಿತು ಪಂಚಾಯಿತಿ ತಿಳಿಸಿದ್ದರಿಂದ ಇದಕ್ಕೆ ಒಪ್ಪಿಕೊಂಡ ಬಿಡ್ಡುದಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದರಿಂದ ದುಬಾರಿ ಬೆಲೆಗೆ ಲೈಸನ್ ಮಾರಾಟವಾಯಿತು.
ಹರಾಜು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಟಿ.ಎ. ಮಹಮ್ಮದ್,ಸದಸ್ಯರಾದ ಕೆ. ಎ. ಇಸ್ಮಾಯಿಲ್, ಅಶ್ರಫ್ ಕೆ. ವೈ, ಶಿವಚಾಳಿಯಂಡ ಜಗದೀಶ್, ಬಿ. ಎಂ. ಪ್ರತಿಪ್,ಮಹಮ್ಮದ್ ಖುರೇಶಿ,ಕುಲ್ಲೇಟಿರ ಅರುಣ್ ಬೇಬ, ಕುಲ್ಲೇಟಿರ ಹೇಮಾವತಿ, ಕೋಟೆರ ನೀಲಮ್ಮ, ವನಜಾಕ್ಷಿ,ಆಮಿನ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ,ಸಿಬ್ಬಂದಿಗಳಾದ ವೇಣು ಸುಬ್ಬಯ್ಯ, ಕುಟ್ಟಪ್ಪ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ರಾಮಕೃಷ್ಣ, ಪ್ರಸನ್ನ ಮತ್ತಿತರರು ಹಾಜರಿದ್ದರು. (ವರದಿ :ಝಕರಿಯ ನಾಪೋಕ್ಲು )