ಮಡಿಕೇರಿ ಮಾ.29 : ಇಂದು ಭ್ರಮೆ ಮತ್ತು ವಾಸ್ತವದ ನಡುವೆ ಹೋರಾಟಗಳು ನಡೆಯುತ್ತಿದೆ, ಮಾನವನ ಮನೋಬಲ ಧ್ವಂಧ್ವದಲ್ಲಿ ಸಿಲುಕಿದೆ. ಅಶ್ಲೀಲತೆಯ ಕಡೆ ಆಕರ್ಷಣೆ ಹೆಚ್ಚಾಗುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕೊಡವ ಮಕ್ಕಡ ಕೂಟದ 64ನೇ ಪುಸ್ತಕ ಬರಹಗಾರ್ತಿ, ಚಿತ್ರ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಅವರು ಬರೆದಿರುವ ಮಹಿಳಾ ಪ್ರಧಾನವಾದ “ಅಗ್ನಿಯಾತ್ರೆ” ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಾಸ್ತವತೆಯನ್ನು ಮರೆಮಾಚಿ ಭ್ರಮಾಲೋಕವನ್ನು ಸೃಷ್ಟಿಸುವ ಕಾಲ ಇದಾಗಿದ್ದು, ಗೌರವಯುತ ಸ್ಥಾನದಲ್ಲಿರುವ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಸ್ತ್ರೀಯ ಬಗ್ಗೆ ಕಾಮನೆಗಳ ವಿಕೃತಿ ಮೆರೆಯುತ್ತಿದೆ, ಇತ್ತೀಚೆಗೆ ಮಕ್ಕಳ ಆಲೋಚನಾ ಲಹರಿ ಕೂಡ ಇದೇ ರೀತಿಯದ್ದಾಗಿದ್ದು, ಇದು ಅತ್ಯಂತ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.
ದೇವತೆಯ ಪ್ರತಿರೂಪವಾಗಿರುವ ಸ್ತ್ರೀಕುಲಕ್ಕೆ ತನ್ನದೇ ಆದ ಗೌರವವಿದೆ. ಆದರೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಯುವತಿಯರೇ ಮದ್ಯ ಮತ್ತು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ, ಅಶ್ಲೀಲತೆಗೆ ಮಾರು ಹೋಗುತ್ತಿದ್ದಾರೆ ಎಂದರು.
ಸಮಾಜದ ಸುಧಾರಣೆಗಾಗಿ ಹಲವು ಪ್ರಯತ್ನಗಳು ನಡೆಯುತ್ತಿದೆ. ಪುಸ್ತಕ ಮತ್ತು ಸಿನಿಮಾದ ರೂಪದಲ್ಲಿ ಸಾಮಾಜಿಕ ಜಾಗೃತಿಯನ್ನು ಉಂಟು ಮಾಡಲಾಗುತ್ತಿದೆ. ಸಾಹಿತ್ಯ ಕ್ಷೇತ್ರದ ಮೂಲಕ ಸಾಮಾಜಿಕ ಪಿಡುಗುಗಳ ವಿರುದ್ಧ ಗುರುತಿಸಿಕೊಳ್ಳಲು ಮಹಿಳಾ ಬರಹಗಾರ್ತಿಯರಿಗೆ ಧೈರ್ಯ ಬೇಕು. ಸಾಹಿತ್ಯ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಈರಮಂಡ ಹರಿಣಿ ವಿಜಯ್ ಅವರು ಧೈರ್ಯದಿಂದ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೊಡವ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ ಕಳೆದ ಅನೇಕ ವರ್ಷಗಳಿಂದ 15 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮತ್ತು ವಿದೇಶದಲ್ಲಿ ಕೊಡವ ಜಾನಪದ ಕಲೆಯನ್ನು ಪರಿಚಯಿಸುವ ಕೆಲಸ ಮಾಡಿದ್ದೇನೆ. ಹಲವು ವಿದ್ಯಾರ್ಥಿಗಳು ಕಲಾವಿದರಾಗಿ ಮಾರ್ಪಟ್ಟಿದ್ದಾರೆ. ನನ್ನ ಕಲಾ ಸೇವೆಯ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಪರಿಣಾಮ ಇಂದು ನನಗೆ ಪದ್ಮಶ್ರೀಯಂತಹ ಪ್ರಶಸ್ತಿ ಲಭಿಸಿದೆ ಎಂದರು.
ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರ್ಕಾರ ಎಲ್ಲಾ ವರ್ಗದ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಎಂ.ಎ.ಕೊಡವ ವಿಭಾಗದ ಸಂಯೋಜಕರಾದ ಮೇಚಿರ ರವಿಶಂಕರ್ ನಾಣಯ್ಯ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸ್ತ್ರೀದೌರ್ಬಲ್ಯದ ದುರ್ಬಳಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳಾ ಬರಹಗಾರ್ತಿಯರಿಂದ ಸ್ತ್ರೀಹೋರಾಟ, ಬದುಕು, ಬವಣೆಗಳ ಬರಹವನ್ನು ನಿರೀಕ್ಷಿಸಬಹುದಾಗಿದೆ. ಸಂಸ್ಕೃತಿ ಮತ್ತು ಸಮಾಜವನ್ನು ಉಳಿಸಲು ಪೂರಕವಾಗುವಂತಹ ಸಣ್ಣ ಪ್ರಯತ್ನದ ಮೂಲಕ ದೊಡ್ಡ ಸಾಧನೆ ಮಾಡಲು ಹೊರಟಿರುವ ಈರಮಂಡ ಹರಿಣಿ ವಿಜಯ್ ಅವರ ಕಾರ್ಯ ಯುವ ಪ್ರತಿಭೆಗಳಿಗೆ ಸ್ಫೂರ್ತಿಯನ್ನು ತುಂಬಲಿದೆ ಎಂದರು.
ಸಾಹಿತಿ ಹಾಗೂ ಮಕ್ಕಳ ತಜ್ಞ ಮೇಜರ್ ಕುಶ್ವಂತ್ ಕೋಳಿಬೈಲು ಮಾತನಾಡಿ ಕೊಡಗಿನಲ್ಲಿ ಮಹಿಳಾ ಕಥೆಗಾರ್ತಿಯರ ದೊಡ್ಡ ಇತಿಹಾಸವೇ ಇದೆ. ಬರಹಗಳು ಪರಂಪರೆಯನ್ನು ಪರಿಚಯಿಸುತ್ತವೆ, ಸಾಮಾಜಿಕ ಕಳಕಳಿಯನ್ನು ಮೆರೆಯುತ್ತವೆ ಎಂದು ಅಭಿಪ್ರಾಯಪಟ್ಟರು.
ಕೊಡಗಿನ ಗೌರಮ್ಮ, ತ್ರಿವೇಣಿ, ವೈದೇಹಿ ಸೇರಿದಂತೆ ಅನೇಕ ಮಹಿಳಾ ಕಥೆಗಾರ್ತಿಯರು ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಈರಂಡ ಹರಿಣಿ ವಿಜಯ್ ಅವರು ಭರವಸೆಯ ಬರಹಗಾರ್ತಿಯಾಗಿದ್ದು, “ಅಗ್ನಿಯಾತ್ರೆ” ಕಾದಂಬರಿಯನ್ನು ಎಲ್ಲರೂ ಓದಿ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 63 ಕೃತಿಗಳನ್ನು ಕೂಟದ ಮೂಲಕ ಬಿಡುಗಡೆ ಮಾಡಲಾಗಿದೆ. ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ಮೂರು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಇದೀಗ 64 ನೇ ಪುಸ್ತಕವಾಗಿ “ಅಗ್ನಿಯಾತ್ರೆ” ಕಾದಂಬರಿಯನ್ನು ಬಿಡುಗಡೆ ಮಾಡಲಾಗಿದೆ ಎಂದರು.
“ಅಗ್ನಿಯಾತ್ರೆ” ಯ ಬರಹಗಾರ್ತಿ ಈರಮಂಡ ಹರಿಣಿ ವಿಜಯ್ ಮಾತನಾಡಿ ಸಣ್ಣ ಕಥೆಯಾಗಿ ಆರಂಭಗೊಂಡ “ಅಗ್ನಿಯಾತ್ರೆ” 272 ಪುಟಗಳ ದೊಡ್ಡ ಕಾದಂಬರಿಯಾಗಿ ಮಾರ್ಪಟ್ಟಿದೆ. ಇದು ನನ್ನ ಎರಡನೇ ಪುಸ್ತಕವಾಗಿದ್ದು, ಇದನ್ನು ರಚಿಸಲು ಒಂದೂವರೆ ವರ್ಷ ಬೇಕಾಯಿತು. ಹೆಣ್ಣೊಬ್ಬಳು ತಾನು ಅನುಭವಿಸುವ ಸಂಕಷ್ಟದ ಅಗ್ನಿಯಿಂದ ಹೊರ ಬರಲು ನಡೆಸುವ ಹೋರಾಟದ ಸುತ್ತ ಕಥೆಯನ್ನು ಹೆಣೆಯಲಾಗಿದೆ ಎಂದು ವಿವರಿಸಿದರು.
ಕಾದಂಬರಿಯನ್ನು ಹೊರತರಲು ಸಹಕರಿಸಿದ ಕೊಡವ ಮಕ್ಕಡ ಕೂಟ, ದಾನಿಗಳು ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
::: ಈರಮಂಡ ಹರಿಣಿ ವಿಜಯ್ ಪರಿಚಯ :::
ಮಡಿಕೇರಿ ತಾಲೂಕಿ ಮೂರ್ನಾಡು ಕೋಡಂಬೂರು ಗ್ರಾಮದ ಈರಮಂಡ ವಿಜಯ್ ಉತ್ತಯ್ಯ ಅವರ ಪತ್ನಿ ಹರಿಣಿ ಬಿಸಿಎ ಪಿಜಿಡಿಸಿಎ ವ್ಯಾಸಂಗ ಮಾಡಿರುವ ಇವರಿಗೆ ಕೇಸರಿಬೋಜಮ್ಮ ಹಾಗೂ ಕುಶಿ ಕಾವೇರಮ್ಮ ಎಂಬ ಇಬ್ಬರು ಪುತ್ರಿಯರಿದ್ದು, ಪ್ರಸ್ತುತ ಎಸ್‍ಎಮ್‍ಎಸ್ ವಿದ್ಯಾ ಸಂಸ್ಥೆ ಅರಮೇರಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
2016ರಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿತ ಉಮ್ಮತ್ತಾಟ್ ಶಿಬಿರದಲ್ಲಿ ಕೊಡಗಿನ ಆಸಕ್ತ ಯುವತಿಯರಿಗೆ ಉಮ್ಮತ್ತಾಟನ್ನು ಕಲಿಸಿ ಜಿಲ್ಲೆಯ ಹಲವು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಕಲೆಯ ಪೋಷಣೆಗೆ ಶ್ರಮಿಸಿರುವ ಇವರಿಗೆ ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿಯಿಂದ “ನಂಗ ಕೊಡವ” ಕೊಡವ ಧಾರಾವಾಹಿಯ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಕಲರ್ಸ್ ಕನ್ನಡ ಚಾನೆಲ್‍ನಲ್ಲಿ ಕನ್ನಡದ ಖ್ಯಾತ ನಟ ಪುನೀತ್ ರಾಜ್‍ಕುಮಾರ್ ನಡೆಸಿಕೊಡುತ್ತಿದ್ದ “ಫ್ಯಾಮಿಲಿ ಪವರ್” ರಿಯಾಲಿಟಿ ಶೋ ನಲ್ಲಿಯೂ ಕುಟುಂಬದೊಂದಿಗೆ ಪಾಲ್ಗೊಂಡಿದ್ದರು.
ನಾಡ ಪೆದ ಆಶಾ, ಪೊಮ್ಮಾಲೆ ಕೊಡಗ್, ದೃಶ್ಯ-2, ನೀ ಮಾಯೇ ಯೊಳಗೊ ಮಾಯೇ ನಿನ್ನಳೋಗೋ, ಕಂದೀಲು ಎಂಬ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಿರ್ಮಾಣ ಮಾಡಿರುವ “ನಾಡ ಪೆದ ಆಶಾ” ಕೊಡವ ಸಿನಿಮಾಕ್ಕೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ 70 ಪ್ರಶಸ್ತಿಗಳು ದೊರೆತಿದೆ.
ಕೊಡವ ಭಾಷೆ, ಸಂಸ್ಕೃತಿಯನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾದಲ್ಲಿ ಮುಖಾಂತರ ಪಸರಿಸಿದ ಇವರು “ಪೊಮ್ಮಾಲೆ ಕೊಡಗ್” ಕೊಡವ ಸಿನಿಮಾದಲ್ಲಿ ನಟಿಸಿರುವುದಲ್ಲದೆ, ಇಂಗ್ಲಿಷ್‍ನಲ್ಲಿ ಸಂಭಾಷಣೆ ಬರೆದು ತಾಂತ್ರಿಕ ವಿಭಾಗದಲ್ಲೂ ಕಾರ್ಯನಿರ್ವಹಿಸಿದ್ದಾರೆ.
ಹಲವಾರು ಪತ್ರಿಕೆ, ಸಂಚಿಕೆಗಳಲ್ಲಿ ಇವರ ಕಥೆಗಳು, ಕವನಗಳು, ಲೇಖನಗಳು ಪ್ರಕಟಗೊಂಡಿವೆ. ದಸರಾ ಕವಿಗೋಷ್ಠಿಯಲ್ಲಿ ಕವನ ರಚಿಸಿ-ವಾಚಿಸಿ ದಸರಾಭಿಮಾನಿಗಳ ಮನ ಗೆದ್ದಿದ್ದು, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಕನ್ನಡಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರಸ್ತುತ ಕೊಡಗು ಕಲಾವಿದರ ಸಂಘದ ಕಾರ್ಯದರ್ಶಿಯಾಗಿ, ಕೊಡಗು ಸಿರಿಗನ್ನಡ ವೇದಿಕೆಯ ಮಡಿಕೇರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರವನ್ನು ಬೆಳೆಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಹರಿಣಿ ವಿಜಯ್ ಅವರ ಚೊಚ್ಚಲ ಪುಸ್ತಕ “ಬದುಕಿನ ಚಕ್ರ” ಈಗಾಗಲೇ ಲೋಕಾರ್ಪಣೆಗೊಂಡಿದ್ದು, “ಅಗ್ನಿಯಾತ್ರೆ” ಎರಡನೇ ಪುಸ್ತಕವಾಗಿದೆ.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*