ಮಡಿಕೇರಿ ಮಾ.30 : ನೆಲಜಿ ಫಾರ್ಮರ್ ಡೆವಲಪ್‍ಮೆಂಟ್ ಹಾಗೂ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ಮೇ 27 ಮತ್ತು 28 ರಂದು ಬಲ್ಲಮಾವಟಿಯಲ್ಲಿ ‘ಕೊಡವ ಒಕ್ಕ ತೋಕ್ ನಮ್ಮೆ’ಯನ್ನು ಆಯೋಜಿಸಲಾಗಿದೆಯೆಂದು ಅಸೋಸಿಯೇಷನ್ ಅಧ್ಯಕ್ಷ ಮಂಡೀರ ನಂದಾ ನಂಜಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಮೇ27 ರಂದು ಪ್ರಥಮ ವರ್ಷದ ಕೊಡವ ಕುಟುಂಬಗಳ ನಡುವಿನ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಮೇ 28 ರಂದು ಮುಕ್ತ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕೊಡವ ಕುಟುಂಬಗಳ ನಡುವಿನ ಸ್ಪರ್ಧೆ ಮತ್ತು ಮುಕ್ತ ಸ್ಪರ್ಧೆ 0.22 ಮತ್ತು 12 ಬೋರ್ ಬಂದೂಕು ವಿಭಾಗಗಳಲ್ಲಿ ನಡೆಯಲಿದೆ. 0.22 ವಿಭಾಗ 50 ಮೀ. ಗುರಿಯನ್ನು ಹಾಗೂ 12 ಬೋರ್ ವಿಭಾಗ 30 ಮೀಟರ್ ಗುರಿಯನ್ನು ಹೊಂದಿರುತ್ತದೆಯೆಂದು ತಿಳಿಸಿದರು.
ಕೊಡವ ಕುಟುಂಬಗಳ ನಡುವಿನ ತೋಕ್ ನಮ್ಮೆಯಲ್ಲಿ ಈಗಾಗಲೆ 150 ತಂಡಗಳು ಪಾಲ್ಗೊಂಡಿವೆ. ಈ ಹಿಂದೆ ಪಂದ್ಯಾವಳಿಯನ್ನು ಜ.12 ಮತ್ತು 14 ರಂದು ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿತ್ತಾದರು, ಅನಿವಾರ್ಯ ಕಾರಣಗಳಿಂದ ಮೇ27 ಮತ್ತು 28ಕ್ಕೆ ಮುಂದೂಡಲಾಗಿರುವುದಲ್ಲದೆ, ಸ್ಪರ್ಧೆಗಳನ್ನು ಬಲ್ಲಮಾವಟಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೆ ಹೆಸರು ನೋಂದಾಯಿಸಿಕೊಂಡವರು ಬದಲಾದ ದಿನಾಂಕದಂದು ಬಲ್ಲಮಾವಟಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಪಂದ್ಯಾವಳಿಯ ದಿನಾಂಕ ಮುಂದೂಡಿರುವುದರಿಂದ ಆಸಕ್ತ ಕೊಡವ ಕುಟುಂಬ ತಂಡಗಳು ಮತ್ತು ಮುಕ್ತ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಹೆಸರನ್ನು ಮೇ15 ರ ಒಳಗಾಗಿ ನೀಡಬೇಕು. ಕೊಡವ ಕುಟುಂಬ ತಂಡಗಳಿಗೆ ಪ್ರವೇಶ ಶುಲ್ಕ 1 ಸಾವಿರ ರೂ. ಮತ್ತು ಮುಕ್ತ ವಿಭಾಗದಲ್ಲಿ ಪ್ರವೇಶಕ್ಕೆ 500 ರೂ. ನಿಗದಿಪಡಿಸಲಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.9880532850, 9449565125ನ್ನು ಸಂಪರ್ಕಿಸಬಹುದೆಂದು ಸ್ಪಷ್ಟಪಡಿಸಿದರು.
ಕೊಡವ ಕುಟುಂಬಗಳ ತೋಕ್ ನಮ್ಮೆಯಲ್ಲಿ ಒಂದು ಕುಟುಂಬದ ಇಬ್ಬರು ಸದಸ್ಯರನ್ನು ಒಳಗೊಂಡ ತಂಡಗಳು ಪಾಲ್ಗೊಳ್ಳಲಿವೆ. ಯಾವುದೇ ಒಂದು ಕುಟುಂಬದ ಎಷ್ಟೇ ಸಂಖ್ಯೆಯ ತಂಡಗಳ ಪಾಲ್ಗೊಳ್ಳುವಿಕೆಗೆ ಅವಕಾಶವನ್ನು ನೀಡಲಾಗಿದೆ. ಸೂಚಿತ ದಿನದಂದು ಬೆಳಗ್ಗೆ 8.30 ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದೆ ಎಂದರು.
ಕೊಡವ ಕುಟುಂಬಗಳ ತೋಕ್ ನಮ್ಮೆ ಮತ್ತು ಮುಕ್ತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವವರಿಗೆ 50 ಸಾವಿರ ರೂ. ನಗದು ಬಹುಮಾನ, ದ್ವಿತೀಯ 30 ಸಾವಿರ ರೂ. ಮತ್ತು ತೃತೀಯ 20 ಸಾವಿರ ರೂ. ಬಹುಮಾನಗಳನ್ನು ನೀಡಲಾಗುತ್ತದೆಂದು ವಿವರಗಳನ್ನಿತ್ತರು.
ಗೋಷ್ಠಿಯಲ್ಲಿ ಅಸೋಸಿಯೇಷನ್ ಕಾರ್ಯದರ್ಶಿ ಮಾಳೆಯಂಡ ಪ್ರದೀಪ್ ಉತ್ತಪ್ಪ, ನಿರ್ದೇಶಕರುಗಳಾದ ಮಾಳೆಯಂಡ ವಿಜು ಅಪ್ಪಚ್ಚ, ಮಾಳೆಯಂಡ ವಿಜು ಚಂಗಪ್ಪ, ಸದಸ್ಯ ಅಪ್ಪುಮಣಿಯಂಡ ಕಿಶನ್ ಮೇದಪ್ಪ, ಸಲಹಾ ಸಮಿತಿ ಸದಸ್ಯ ಮಾಳೆಯಂಡ ಅಪ್ಪಣ್ಣ ಉಪಸ್ಥಿತರಿದ್ದರು.