ಶ್ರೀ ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಉಡುಪಿಯ ನವಶಕ್ತಿಪೀಠಗಳಲ್ಲೊಂದಾದ ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ಶಕ್ತಿಪೀಠ. ಉಡುಪಿ ಕುರಿತು ಕರ್ನಾಟಕದ ಕರಾವಳಿ ತೀರದಲ್ಲಿ ನೆಲೆಸಿರುವ ಒಂದು ಪ್ರಖ್ಯಾತ ಪ್ರವಾಸಿ ತಾಣ ಉಡುಪಿ. ಉಡುಪಿಯು ಕೇವಲ ಕಡಲ ತೀರಗಳಿಂದಾಗಿ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದ ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲೊಂದು. ಉಡುಪಿಯು ಮೂಲತಃ ಶ್ರೀಕೃಷ್ಣ ಮಠದಿಂದಾಗೆ ದೇಶದಲ್ಲೆ ಸಾಕಷ್ಟು ಪ್ರಸಿದ್ಧಿಗಳಿಸಿದ ಧಾರ್ಮಿಕ ಕೇಂದ್ರವಾಗಿದೆ.ಉಡುಪಿಯಲ್ಲಿ ಸಾಕಷ್ಟು ಇತರೆ ದೇವಾಲಯಗಳಿದ್ದು ಎಲ್ಲವೂ ವಿಶೇಷ ಹಾಗೂ ಮಹತ್ವವುಳ್ಳ ದೇವಾಲಯಗಳೆ ಆಗಿವೆ. ಅಂತೆಯೆ ಕರ್ನಾಟಕದಲ್ಲಿ ಉಡುಪಿಯನ್ನು ದೇವಾಲಯಗಳ ಪಟ್ಟಣ ಎಂದೆ ಕರೆಯುತ್ತಾರೆ. ಅಲ್ಲದೆ ಉಡುಪಿಯು ತನ್ನದೆ ಆದ ಕೆಲವು ವಿಶೇಷ ಶಕ್ತಿಪೀಠಗಳಿಂದಾಗಿ ಪ್ರವಾಸಿಗರ ಗಮನಸೆಳೆಯುತ್ತದೆ. ಅವುಗಳಲ್ಲೊಂದಾಗಿದೆ ಇಂದ್ರಾಣಿ ಶಕ್ತಿಪೀಠ.
ನಿರ್ಮಾಣ
ಶ್ರೀ ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನವು 11ನೇ ಶತಮಾನದ ದೇವಾಲಯವಾಗಿದ್ದು, ಇದು ದುರ್ಗಾ ದೇವಿಗೆ ಸಮರ್ಪಿತವಾಗಿದೆ. ಈ ದೇವಾಲಯವನ್ನು 1993 ರಲ್ಲಿ ಪುನಃ ನಿರ್ಮಾಣ ಮಾಡಲಾಗಿದೆ. ನೇಪಾಳದ ಪ್ರಖ್ಯಾತ ಪಶುಪತಿನಾಥ ದೇವಾಲಯ ಮಾಜಿ ಮುಖ್ಯ ಅರ್ಚಕರಾದ ರಾವಲ್ ಪದ್ಮನಾಭ ಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಈ ದೇವಾಲಯದ ನವೀನ ಮಾದರಿಯನ್ನು ನಿರ್ಮಿಸಲಾಗಿದೆ.
ಇತಿಹಾಸ
ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಾಲಯ ಉಡುಪಿ ನಗರ ಕೇಂದ್ರದಿಂದ ಪೂರ್ವಕ್ಕೆ ಎರಡು ಕಿ.ಮೀ ಸಾಗಿದರೆ ಕುಂಜಿಬೆಟ್ಟು ಎಂಬ ಸ್ಥಳವು ದೊರೆಯುತ್ತದೆ. ವೇದಾಚಲ ಅಂದರೆ ಇಂದಿನ ಮಣಿಪಾಲದ ಪಶ್ಚಿಮಕ್ಕೆ ಈ ಪ್ರದೇಶವಿದೆ. ಸಾಕಷ್ಟು ಐತಿಹಾಸಿಕ ಶ್ರೀಮಂತಿಕೆಯನ್ನು ಪಡೆದ ಸ್ಥಳ ಇದಾಗಿದ್ದು ಇಲ್ಲಿರುವ ಶಕ್ತಿ ದೇವಿಯ ದೇವಾಲಯವನ್ನೆ ಇಂದ್ರಾಣಿ ಶಕ್ತಿಪೀಠ ಎಂದು ಕರೆಯುತ್ತಾರೆ. ಶ್ರೀ ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಾಲಯ ಎಂದು ಕರೆಯಲಾಗುವ ಈ ದೇವಾಲಯವು ಸಾಕಷ್ಟು ಪುರಾತನವಾದ ದೇವಾಲಯಲವೆ ಆಗಿದೆ. ಸುಮಾರು ಹನ್ನೊಂದನೇಯ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯ ಇದಾಗಿದೆ ಎಂದು ಹೇಳಲಾಗುತ್ತದೆ. ಆದರೆ ಪ್ರಸ್ತುತ ದೇವಾಲಯವು ನವೀಕರಣಗೊಂಡ ರಚನೆಯಾಗಿದೆ. ಇಂದ್ರಾಣಿಯನ್ನು ವೇದ-ಪುರಾಣಗಳಲ್ಲಿ ಅವಲೋಕಿಸಿದಾಗ ಇವಳೊಬ್ಬ ಸಪ್ತ ಮಾತೃಕೆಯರಲ್ಲೊಬ್ಬಳಾದ ದೇವಿಯಾಗಿ ಕಂಡುಬರುತ್ತಾಳೆ. ತದನಂತರ ಮುಂದಿನ ಗ್ರಂಥಾದಿಗಳಲ್ಲಿ ಇಂದ್ರಾಣಿಯನ್ನು ಶಕ್ತಿಯ ದ್ಯೋತಕವಾಗಿ ವಿವರಿಸಲಾಗಿದೆ. ಪ್ರಬುದ್ಧ ಶಕ್ತಿ ಮಾತೆಯಾಗಿಯೂ ಕೆಲವು ಕಡೆ ದುರ್ಗಾ ದೇವಿಯ ಅವತಾರವಾಗಿಯೂ ಇಂದ್ರಾಣಿಯನ್ನು ವರ್ಣಿಸಲಾಗಿದೆ.
ಪೌರಾಣಿಕ ಹಿನ್ನೆಲೆ
ಅನಾರೋಗ್ಯದಿಂದಿದ್ದ ಚ್ಯವನ ಮಹರ್ಷಿಗಳು ತಮ್ಮ ರೋಗ ನಿವಾರಣೆಗಾಗಿ ತಪೋನಿರತರಾಗಿದ್ದಾಗ ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ ಚ್ಯವನ ಮಹರ್ಷಿಗಳನ್ನು ರೋಗಮುಕ್ತರನ್ನಾಗಿ ಅನುಗ್ರಹಿಸಿದ ಈ ಪವಿತ್ರ ಕ್ಷೇತ್ರವೇ ವೇದಾದ್ರಿ (ವೇದಾಚಲ) ಎಂಬ ಐತಿಹ್ಯವಿದೆ. ತನ್ನ ಪತಿ ಇಂದ್ರನು ಊರ್ವಶಿಯಲ್ಲಿಅನುರಕ್ತನಾಗಿರುತ್ತಾನೆಂದು ಕುಪಿತಳಾದ ಶಚೀದೇವಿ ಎಲ್ಲೆಲ್ಲೋ ಸುತ್ತುತ್ತಿದ್ದಾಗ ನಾರದ ಮಹರ್ಷಿಯು ಆಕೆಯನ್ನು ಸಾಂತ್ವನಗೊಳಿಸಿ ಚ್ಯವನ ಮಹರ್ಷಿಗಳಿದ್ದ ಈ ಕ್ಷೇತ್ರಕ್ಕೆ ಕರೆತಂದರು. ಶ್ರೀದೇವಿಯ ವರದಿಂದ ಆಕೆ ಪತಿ ಇಂದ್ರನೊಡನೆ ಸಮಾಗಮವನ್ನು ಹೊಂದಿದಳೆಂದು ಸ್ಕಂದ ಪುರಾಣ ಹೇಳುತ್ತದೆ. ಬಳಿಕ ಈ ಕ್ಷೇತ್ರವು ಶಚಿಯ ಹೆಸರಿನಿಂದ ಇಂದ್ರಾಣಿಯಾಗಿ ಪ್ರಸಿದ್ಧಿ ಪಡೆಯಿತು. ಇಂದ್ರಾಣಿ ತೀರ್ಥದಲ್ಲಿ ತೀರ್ಥ ಸ್ನಾನ, ದೇವಿ ದರ್ಶನ ಪಡೆದಲ್ಲಿ ವಿವಾಹಾಸಕ್ತ ವಧು ಶೀಘ್ರವೇ ಯೋಗ್ಯ ವರನನ್ನು ಪಡೆದು ಸುಖೀ ದಾಂಪತ್ಯ ಜೀವನ ನಡೆಸುತ್ತಾಳೆ.