ಕಣಿವೆ ಮಾ.30 : ಕಣಿವೆ ಗ್ರಾಮದ ಕಾವೇರಿ ನದಿ ದಂಡೆಯಲ್ಲಿನ ಶ್ರೀ ರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ಕಣಿವೆ, ಹುಲುಸೆ ಹಾಗೂ ಹಕ್ಕೆ ಗ್ರಾಮಗಳ ಪ್ರತಿ ಮನೆಗಳ ಮುಂದೆ ಭಕ್ತ ಜನರು ತಳಿರು ತೋರಣಗಳನ್ನು ಕಟ್ಟಿದರೆ, ಹೊಸ ಉಡುಗೆ ತೊಟ್ಟ ಭಕ್ತ ಮಹಿಳೆಯರು ತಮ್ಮ ತಮ್ಮ ಮನೆ ಮುಂಬದಿ ರಂಗೋಲಿ ಹಚ್ಚಿ ಸಂಭ್ರಮಿಸಿದರು.
ಮುಂಜಾನೆಯಿಂದಲೇ ದೇವಾಲಯದ ಗರ್ಭ ಗುಡಿಯಲ್ಲಿ ಪ್ರತಿಷ್ಠಾಪಿತ ಶಿವ ಲಿಂಗಕ್ಕೆ ವಿವಿಧ ಬಗೆಯ ಅಭಿಷೇಕಗಳನ್ನು ನೆರವೇರಿಸಿ, ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಹಾಮಂಗಳಾರತಿ ನೆರವೇರಿತು.
ಹಾಗೆಯೇ ರಥೋತ್ಸವದಲ್ಲಿ ಪ್ರತಿಷ್ಠಾಪಿಸುವ ಶ್ರೀರಾಮನ ಕಂಚಿನ ವಿಗ್ರಹಕ್ಕೆ ಕೇಸರಿ ಪೇಟವನ್ನು ಕಟ್ಟಿ ಅಲಂಕೃತಗೊಳಿಸಿದ ಬಗೆ ನೋಡುಗ ಭಕ್ತರ ಗಮನ ಸೆಳೆಯಿತು.
ಬೆಂಗಳೂರು ಮೂಲಕದ ನರಹರಿ ಭಟ್ ನೇತೃತ್ವದ ಅರ್ಚಕರ ತಂಡದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ನೆರೆಯ ಹೆಬ್ಬಾಲೆ ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಸಾಂಪ್ರದಾಯಿಕವಾಗಿ ಕಾಶಿಯಿಂದ ಅಂಚೆಯಲ್ಲಿ ಬರುವ ಪವಿತ್ರ ಗಂಗಾಜಲವನ್ನು ಅಲಂಕೃತ ತೆರೆದ ವಾಹನದಲ್ಲಿ ಹೆಬ್ಬಾಲೆ ದೇವಾಲಯ ಸಮಿತಿಯವರು ಮೆರವಣಿಗೆಯಲ್ಲಿ ತಂದಾಗ, ಹಕ್ಕೆ ಬಳಿ ರಾಮಲಿಂಗೇಶ್ವರ ದೇವಾಲಯ ಸಮಿತಿ ಪದಾಧಿಕಾರಿಗಳು ಅಧ್ಯಕ್ಷ ಕೆ.ಎನ್.ಸುರೇಶ್ ನೇತೃತ್ವದಲ್ಲಿ ಬರಮಾಡಿಕೊಂಡು ವೀರಭದ್ರ ನೃತ್ಯ ಹಾಗೂ ಚಂಡೇ ವಾದ್ಯದೊಂದಿಗೆ ಮುಖ್ಯ ರಸ್ತೆಯ ಮೂಲಕ ದೇವಾಲಯದ ಸನ್ನಿಧಿಗೆ ತರಲಾಯಿತು.
ಬಳಿಕ ಅಲಂಕೃತ ಶ್ರೀ ರಾಮಲಿಂಗೇಶ್ವರ ಲಿಂಗ ಹಾಗೂ ಉತ್ಸವ ಮೂರ್ತಿ ಯ ಮೇಲೆ ಗಂಗೋಧಕ ಪ್ರೋಕ್ಷಣೆ ಮಾಡಿದ ನಂತರ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿದಾಗ ನೆರೆದಿದ್ದ ಸಹಸ್ರಾರು ಭಕ್ತ ಜನರು ರಥದ ಮೇಲೆ ಬಾಳೆ ಹಣ್ಣು ಹಾಗೂ ಜವುನಗಳನ್ನು ಎಸೆದು ಪುನೀತರಾದರು.
ಬಳಿಕ ಪೂಜಾ ವಿಧಿ ವಿಧಾನಗಳ ನಂತರ ಕಣಿವೆ ಗ್ರಾಮದಲ್ಲಿನ ಅರಳಿ ಮರದ ವರೆಗೆ ರಥವನ್ನು ಎಳೆತಂದು ಸಂಜೆ ಸ್ವಸ್ಥಾನಕ್ಕೆ ಮರಳಿಸಲಾಯಿತು.
ರಥೋತ್ಸವದ ಅಂಗವಾಗಿ ದೇವಾಲಯ ಸಮಿತಿ ವತಿಯಿಂದ ನೆರೆದ ಸಹಸ್ರಾರು ಭಕ್ತರಿಗೆ ಮಹಾ ಪ್ರಸಾದ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಥೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ನಾಲ್ಕು ದಿನಗಳ ಕಾಲ ಜಾತ್ರೆಯನ್ನು ಏರ್ಪಡಿಸಲಾಗಿದೆ.