ಮಡಿಕೇರಿ ಏ.1 : ವಿವಾಹ ಸಮಾರಂಭ ಮೊದಲಾದ ಖಾಸಗಿ ಕಾರ್ಯಕಗಳ ಆಯೋಜನೆಗೆ ಯಾವುದೇ ನಿರ್ಬಂಧಗಳಿಲ್ಲ. ಸಾರ್ವಜನಿಕವಾಗಿ ಆಚರಿಸುವ ದೇವರ ಉತ್ಸವಗಳಲ್ಲಿ ನಡೆಸುವ ಮೆರವಣಿಗೆ ಮೊದಲಾದವುಗಳಿಗೆ ಅನುಮತಿಯನ್ನು ಪಡೆದುಕೊಳ್ಳಬೇಕು. ಪ್ರಸಾದ ವಿತರಣೆ ಬಿಟ್ಟರೆ ಯಾವುದೇ ಕಾರಣಕ್ಕು ಅನ್ನದಾನಕ್ಕೆ ಅವಕಾಶ ಇರುವುದಿಲ್ಲ ಎಂದು ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸ್ಪಷ್ಟಪಡಿಸಿದ್ದಾರೆ.
::: ಕಟ್ಟು ನಿಟ್ಟಿನ ತಪಾಸಣೆ :::
ಜಿಲ್ಲೆಯ ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೆರುಂಬಾಡಿಯಲ್ಲಿದ್ದ ಚೆಕ್ ಪೋಸ್ಟ್ನ್ನು ಮಾಕುಟ್ಟಕ್ಕೆ ಸ್ಥಳಾಂತರಿಸಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
::: ಮಾಧ್ಯಮಗಳಿಗೆ ನಿರ್ಬಂಧವಿಲ್ಲ :::
ಮುದ್ರಣ ಮತ್ತು ದೃಶ್ಯ ವಾಹಿನಿಗಳಲ್ಲಿ ಚುನಾವಣೆ ಸಂಬoಧವಾದ ಸುದ್ದಿಗಳನ್ನು ಪ್ರಕಟಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಅಭ್ಯರ್ಥಿಗಳ ಸಂದರ್ಶನವನ್ನು ಪ್ರಕಟಿಸುವ ಅಥವಾ ದೃಶ್ಯ ವಾಹಿನಿಗಳಲ್ಲಿ ಬಿತ್ತರ ಮಾಡುವ ಸಂದರ್ಭ ಎಲ್ಲಾ ಪಕ್ಷಗಳಿಗೂ ಸಮಾನ ಅವಕಾಶವನ್ನು ನೀಡುವುದು ಅವಶ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
::: ಬಂದೂಕುಗಳ ಠೇವಣಿ :::
ಚುನಾವಣಾ ಅವಧಿಯಲ್ಲಿ ಬಂದೂಕು ಪರವಾನಗಿ ಹೊಂದಿರುವವರು ಸಮೀಪದ ಠಾಣೆಗಳಲ್ಲಿ ಬಂದೂಕುಗಳನ್ನು ಠೇವಣಿ ಇರಿಸಬೇಕಾಗುತ್ತದೆ ಎಂದು ತಿಳಿಸಿದರು.










