ಮಡಿಕೇರಿ ಏ.3 : ಕೊಡಗಿನ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಹೆಚ್.ಎಂ.ಸೋಮಪ್ಪ ಅವರ ಹೆಸರನ್ನು ಪಕ್ಷದ ರಾಜ್ಯ ಘಟಕದ ಸಹ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಬಿ.ಅಮ್ಜದ್ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದ ಶಾಸನ ಸಭೆಗಳಿಗೆ ಆಯ್ಕೆಯಾಗುತ್ತಿರುವವರು ರೈತರ, ಕಾರ್ಮಿಕರ ಮತ್ತು ಜನಸಾಮಾನ್ಯರ ಧ್ವನಿಯಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಜನಪರ ಹೋರಾಟದ ಭಾಗವಾಗಿ ಈ ಬಾರಿ ಸಿಪಿಐ ಕೊಡಗಿನ ಮಡಿಕೇರಿ ಸೇರಿದಂತೆ ರಾಜ್ಯದ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದಾಗಿ ತಿಳಿಸಿದರು.
ಕೊಡಗಿನ ಮಡಿಕೇರಿ ಕ್ಷೇತ್ರದಿಂದ ಹೆಚ್.ಎಂ.ಸೋಮಪ್ಪ, ಚಿಕ್ಕಮಗಳೂರಿನ ಮೂಡಿಗೆರೆ ಕ್ಷೇತ್ರದಿಂದ ಕೆಳಗೂರು ರಮೇಶ್, ವಿಜಯನಗರದ ಕೂಡ್ಲಿಗಿ ಕ್ಷೇತ್ರದಿಂದ ವೀರಣ್ಣ, ತುಮಕೂರಿನ ಶಿರಾ ಕ್ಷೇತ್ರದಿಂದ ಗಿರೀಶ್, ಗುಲ್ಬರ್ಗದ ಜೇವರ್ಗಿಯಿಂದ ಮಹೇಶ್ ಕುಮಾರ್ ರಾಥೋಡ್, ಅಳಂದ ಕ್ಷೇತ್ರದಿಂದ ಮೌಲಾಮುಲ್ಲಾ, ಕೋಲಾರದ ಕೆಜಿಎಫ್ ಕ್ಷೇತ್ರದಿಂದ ಜ್ಯೋತಿ ಬಸು ಅವರನ್ನು ಕಣಕ್ಕಿಳಿಸುತ್ತಿರುವುದಾಗಿ ಮಾಹಿತಿ ನೀಡಿದರು.
ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಕೋಮುವಾದ, ಭಷ್ಟಾಚಾರ ಮತ್ತು ದ್ವೇಷವಷ್ಟೆ ರಾಜಕೀಯದ ಮುನ್ನೆಲೆಗೆ ಬರುತ್ತಿದೆ. ಇದರಿಂದ ಪ್ರಜಾತಂತ್ರ ವ್ಯವಸ್ಥೆ ಶಿಥಿಲವಾಗುತ್ತಿದ್ದು, ಜನಸಾಮಾನ್ಯರ ಮೂಲಭೂತ ಸಮಸ್ಯೆಗಳು ತೆರೆಮರೆಗೆ ಸರಿಯುತ್ತಿದೆಯೆಂದು ಬೇಸರ ವ್ಯಕಪಡಿಸಿದರು.
ಕಳೆದ ಏಳೆಂಟು ವರ್ಷಗಳ ಕಾಲ ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿದೆ. ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಆ ಪಕ್ಷ ನೀಡಿರುವ ಭರವಸೆಗಳು ಹುಸಿಯಾಗಿದ್ದು, ನಿತ್ಯೋಪಯೋಗಿ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಬಾರದೆ ಗಗನಕ್ಕೇರುತ್ತಿದೆ. 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಸುಳ್ಳಾಗಿದ್ದು, ಇದೀಗ ಉದ್ಯೋಗ ಸೃಷ್ಟಿ ಲಕ್ಷಕ್ಕೆ ಬಂದು ನಿಂತಿದೆಯೆಂದು ಲೇವಡಿ ಮಾಡಿದರು.
ನಾನು ತಿನ್ನುವುದಿಲ್ಲ, ಇತರರಿಗೂ ತಿನ್ನಲು ಬಿಡುವುದಿಲ್ಲವೆನ್ನುವ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಪಕ್ಷಗಳಿಂದ ಭ್ರಷ್ಟ್ಟಾಚಾರದ ನಿಯಂತ್ರಣ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರ್ಕಾರವೆಂದು ಹೇಳಿಕೊಳ್ಳಲಾಗುತ್ತಿದೆಯಾದರು ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆಯೆಂದು ಅಮ್ಜದ್ ಆರೋಪಿಸಿದರು.
ಪ್ರಸ್ತುತ ಕಂಡು ಬರುತ್ತಿರುವ ಕೋಮುದ್ವೇಷದ ರಾಜಕಾರಣ ತೊಲಗಿ ಜನಪರವಾದ ರಾಜಕಾರಣಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕಾಗಿದೆ. ಈ ಹಿನ್ನೆಲೆ ನಿರಂತರವಾಗಿ ರೈತರು, ಕಾರ್ಮಿಕರು, ಜನಸಾಮಾನ್ಯರ ಪರವಾಗಿ ಹೋರಾಟಗಳನ್ನು ರೂಪಿಸಿಕೊಂಡು ಬರುತ್ತಿರುವ ಸಿಪಿಐ ಈ ಬಾರಿ ಚುನಾವಣೆಗೆ ಧುಮುಕಿರುವುದಾಗಿ ಸ್ಪಷ್ಟಪಡಿಸಿದರು.
ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ತನ್ನ ಬದ್ಧತೆಯನ್ನು ಉಳಿಸಿಕೊಂಡಿಲ್ಲವೆಂದು ಆರೋಪಿಸಿದ ಅಮ್ಜದ್, ಬಿಜೆಪಿಯ ದುರಾಡಳಿತಕ್ಕೆ ಪರ್ಯಾಯವಾಗಿ ಎಡಪಕ್ಷಗಳನ್ನು ಒಳಗೊಂಡಂತೆ ಎಲ್ಲಾ ಪಕ್ಷಗಳ ಧ್ರುವೀಕರಣವಾಗಬೇಕೆನ್ನುವ ಸಲಹೆಯನ್ನು ಸಿಪಿಐ ನೀಡಿತ್ತಾದರು, ಕಾಂಗ್ರೆಸ್ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಕೋಮವಾದ, ಬೆಲೆ ಏರಿಕೆ ಮೊದಲಾದ ವಿಚಾರಗಳನ್ನು ಕೈಗೆತ್ತಿಕೊಂಡು ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ನಡೆಸಿದರು. ಆದರೆ, ಚುನಾವಣೆಯ ಮಹತ್ವದ ಅವಧಿಯಲ್ಲಿ ಕೈಕಟ್ಟಿ ಕುಳಿತಿದ್ದಾರೆಂದು ಬೇಸರ ವ್ಯಕ್ತಪಡಿಸಿ, ಇನ್ನಾದರು ಕಾಂಗ್ರೆಸ್ ಈ ನಿಟ್ಟಿನಲ್ಲಿ ಚಿಂತನೆ ಹರಿಸಬೇಕೆಂದು ಹೇಳಿದರು.
ಮಡಿಕೇರಿ ಕ್ಷೇತ್ರದ ಸಿಪಿಐ ಅಭ್ಯರ್ಥಿ ಹಾಗೂ ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿ ಹೆಚ್.ಎಂ.ಸೋಮಪ್ಪ ಮಾತನಾಡಿ, ಪಕ್ಷದಿಂದ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾದ ಹೋರಾಟಗಳನ್ನು ನಡೆಸಿಕೊಂಡು ಬರಲಾಗಿದೆ. ಸೂರಿಲ್ಲದವರಿಗಾಗಿ ಸೂರು ಒದಗಿಸುವ ನಿಟ್ಟಿನಲ್ಲಿ ‘ಸೂರಿಗಾಗಿ ಸಮರ’ ಎನ್ನುವ ಆಂದೋಲವನ್ನು ಪಕ್ಷ ರೂಪಿಸಿತ್ತು. ಜಿಲ್ಲೆಯಲ್ಲಿನ ವನ್ಯಜೀವಿ- ಮಾನವ ಸಂಘರ್ಷ, ದುಡಿಯುವ ವರ್ಗದ ಶೋಷಣೆ, ರೈತ ಸಮೂಹಕ್ಕೆ ನಡೆಯುತ್ತಿರುವ ಅನ್ಯಾಯ, ಕಾರ್ಮಿಕ ಸಮೂಹದ ಮೂಲಭೂತ ಬೇಡಿಕೆಗಳಿಗೆ ಸೂಕ್ತ ಸ್ಪಂದನ ದೊರಕಬೇಕಾಗಿದೆ. ಈ ಹಿನ್ನೆಲೆ ಚುನಾವಣಾ ಸ್ಪರ್ಧೆಗೆ ಇಳಿದಿದ್ದು, ಜನತೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನಿಲ್, ಜಿಲ್ಲಾ ಸಹ ಕಾರ್ಯದರ್ಶಿ ರಫೀಕ್ ನವಲಗುಂದ, ಜಿಲ್ಲಾ ಜಂಟಿ ಕಾರ್ಯದರ್ಶಿ ರಮೇಶ್ ಮಾಯಮುಡಿ ಹಾಗೂ ಸೋಮವಾರಪೇಟೆ ತಾಲ್ಲೂಕು ಕಾರ್ಯದರ್ಶಿ ಎಸ್.ಹೆಚ್.ಶಬಾನ ಉಪಸ್ಥಿತರಿದ್ದರು.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*