ಮಡಿಕೇರಿ ಏ.6 : ಕೊಡಗು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಮೂಡಿದ್ದ ತೀವ್ರ ಕುತೂಹಲಕ್ಕೆ ಕೊನೆಗೂ ಪಕ್ಷದ ವರಿಷ್ಠರು ಅಂತ್ಯ ಹಾಡಿದ್ದಾರೆ. ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಡಾ.ಮಂತರ್ ಗೌಡ ಅವರನ್ನು ಘೋಷಿಸಿದ್ದಾರೆ.
ಟಿಕೆಟ್‌ಗಾಗಿ ಮಾಜಿ ಸಚಿವ ಬಿ.ಎ.ಜೀವಿಜಯ, ಕೆಪಿಸಿಸಿ ಪ್ರಮುಖ ಹೆಚ್.ಎಸ್.ಚಂದ್ರಮೌಳಿ ಹಾಗೂ ಹರಪಳ್ಳಿ ರವೀಂದ್ರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ ಪಕ್ಷದ ಆಂತರಿಕ ಸಮೀಕ್ಷೆಯ ಮೂಲಕ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಒಲವು ಡಾ.ಮಂತರ್ ಗೌಡ ಅವರ ಪರ ಇದ್ದ ಕಾರಣ ಇವರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ. ಅಲ್ಲದೆ ಮಂತರ್ ಗೆ ಟಿಕೆಟ್ ನೀಡಿದರೆ ಮಾತ್ರ ಪಕ್ಷದ ಪರ ಕೆಲಸ ಮಾಡುವುದಾಗಿ ಪದಾಧಿಕಾರಿಗಳು ಸಂದೇಶವನ್ನು ರವಾನೆ ಮಾಡಿದ್ದರು ಎಂದು ತಿಳಿದು ಬಂದಿದೆ.
ಸ್ಥಳೀಯ ಸಂಸ್ಥೆಗಳಿoದ 2022 ರಲ್ಲಿ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎಂ.ಪಿ.ಸುಜಾ ಕುಶಾಲಪ್ಪ ವಿರುದ್ಧ ಮಂತರ್ ಗೌಡ ಸ್ಪರ್ಧಿಸಿ 603 ಮತ ಪಡೆದು ಗಮನ ಸೆಳೆದಿದ್ದರು. ಸುಜಾ ಕುಸಾಲಪ್ಪ ಅವರು 705 ಮತಗಳನ್ನು ಪಡೆದು ಜಯಗಳಿಸಿದ್ದರು. ಕೊಡಗಿನಲ್ಲಿ ರಾಜಕೀಯವಾಗಿ ಗುರುತಿಸಿಕೊಂಡ ಸ್ವಲ್ಪ ಸಮಯದಲ್ಲೇ ಚಿರಪರಿಚಿತರಾದ ಮಂತರ್ ಗೌಡ ವಿಧಾನ ಪರಿಷತ್ ಚುನಾವಣೆ ಸಂದರ್ಭ ಬಿಜೆಪಿ ಬೆಂಬಲಿಗರಿoದಲೂ ಮತ ಸೆಳೆಯುವ ಮೂಲಕ ಜಿಲ್ಲಾ ಕಾಂಗ್ರೆಸ್ ನಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದ್ದರು.
ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಪ್ರತಿಕ್ರಿಯೆ ನೀಡಿದ ಮಂತರ್ ಗೌಡ, ಜನ ನನ್ನೊಂದಿಗಿದ್ದಾರೆ, ನನ್ನ ಬಗ್ಗೆ ಜನ ತಿಳಿದುಕೊಂಡಿದ್ದಾರೆ. ನನ್ನ ನಿಲುವು ಸದಾ ಜನಪರವಾಗಿರುತ್ತದೆ, ಕ್ಷೇತ್ರದ ಜನರೇ ನನಗೆ ಶ್ರೀರಕ್ಷೆ. ಭರ್ಜರಿ ಗೆಲುವು ಸಾಧಿಸುವ ಮೂಲಕ ನಾನು ಇತಿಹಾಸ ನಿರ್ಮಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.