ಸೋಮವಾರಪೇಟೆ ಏ.9 : ಕಳೆದ ಒಂದೂವರೆ ದಶಕಗಳಿಂದ ಗ್ರಾಮದ ರಸ್ತೆಗೆ ಅನುದಾನ ಕೊಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಸುಳಿಮಳ್ತೆ ಗ್ರಾಮಸ್ಥರು ಮುಂಬರುವ ವಿಧಾನಸಭಾ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ.
ಗ್ರಾಮದಲ್ಲಿ ಸಭೆ ನಡೆಸಿದ ಗ್ರಾಮಸ್ಥರು, ತೀರ್ಮಾನ ತೆಗದುಕೊಂಡು ಗ್ರಾಮದ ಮುಖ್ಯರಸ್ತೆಗೆ ಮತದಾನ ಬಹಿಷ್ಕಾರದ ಬ್ಯಾನರ್ ಕಟ್ಟಿದ್ದರು.
ಹೊನವಳ್ಳಿ ಜಂಕ್ಷನ್‌ನಿಂದ ಸುಳಿಮಳ್ತೆ ಮಾರ್ಗವಾಗಿ ದೊಡ್ಡಮಳ್ತೆ ಹೊನ್ನಮ್ಮನ ಕೆರೆ ಜಂಕ್ಷನ್ ತನಕ ರಸ್ತೆ ಕಾಮಗಾರಿಗೆ ಅನುದಾನ ಕೋರಲಾಗಿತ್ತು. ಆದರೆ ಇದುವರೆಗೆ ಜನಪ್ರತಿನಿಧಿಗಳು ಅನುದಾನ ಕಲ್ಪಿಸದೆ ಅನ್ಯಾಯ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಕೃಷಿಕರು ವಾಸಿಸುವ ಗ್ರಾಮ, ರಸ್ತೆ ಗುಂಡಿಬಿದ್ದು ವಾಹನ ಚಾಲನೆ ಕಷ್ಟಕರವಾಗಿದೆ. ಕೃಷಿ ಫಸಲನ್ನು ಸಾಗಿಸಲು ಕಷ್ಟವಾಗುತ್ತಿದೆ. ಪ್ರತಿವರ್ಷ ಗೌರಿ-ಗಣೇಶ ಹಬ್ಬದಂದು ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡಮಳ್ತೆ ಗ್ರಾಮದಲ್ಲಿರುವ ಹೊನ್ನಮ್ಮನ ಕೆರೆ ಜಾತ್ರೆಗೆ ಸಾವಿರಾರು ಜನರು ಸೇರುತ್ತಾರೆ. ಹೆಚ್ಚಿನ ಜನರು ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ. ಆದರೂ ರಸ್ತೆಗೆ ಅನುದಾನ ಕಲ್ಪಿಸದೆ ಅನ್ಯಾಯವೆಸಲಾಗಿದೆ ಎಂದು ಗ್ರಾಮಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಗೋವಿಂದ, ಹಿರಿಯರಾದ ಎಸ್.ಆರ್.ಪುಟ್ಟರಾಜು, ಹೊನವಳ್ಳಿ ಚಂದ್ರಶೇಖರ್, ಎಸ್.ಡಿ.ದಿವಾಕರ್, ಲಿಂಗಸ್ವಾಮಿ, ಲಿಂಗರಾಜು ಮತ್ತಿತರರು ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ರಸ್ತೆಗೆ ಅನುದಾನ ಬಿಡುಗಡೆಗೊಳಿಸಿದರೆ ಮತದಾನದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.








