ಸುಂಟಿಕೊಪ್ಪ ಏ.11 : ಕೊಡಗರಹಳ್ಳಿಯಲ್ಲಿ ನೆಲೆಸಿರುವ ಶ್ರೀ ಭೈತೂರಪ್ಪ ಪೊವ್ವೆದಿ ಬಸವೇಶ್ವರ ದೇವರ ವಾರ್ಷಿಕ ಉತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮುಂಜಾನೆ ಶ್ರೀಗಣ ಹೋಮದೊಂದಿಗೆ ವಾಷೀಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಶ್ರೀ ಬೈತೂರಪ್ಪ ಪೊವ್ವೆದಿ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಮತ್ತು ರುದ್ರಾಭೀಷೇಕವನ್ನು ದೇವಾಲಯದ ಪ್ರಧಾನ ಆರ್ಚಕ ಭಾನು ಪ್ರಕಾಶ್ ಭಟ್, ರಘುಪತಿ ಭಟ್ ಹಾಗೂ ರಮೇಶ್ ವೈದ್ಯ ಅವರ ತಂಡ ನೆರವೇರಿಸಿದರು.
ದೇವತಕ್ಕರಾದ ಜಗ್ಗರಂಡ ಹ್ಯಾರಿ ಕಾರ್ಯಪ್ಪ ಅವರ ಮನೆಯಿಂದ ದೇವರ ಭಂಡಾರವನ್ನು ಅರ್ಚಕ ನರಸಿಂಹ ಭಟ್ ಅವರ ನೇತೃತ್ವದಲ್ಲಿ ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೇರವೇರಿಸಿ ದುಡಿಕೊಟ್ ಪಾಟ್ ಸಾಂಪ್ರಾದಾಯಿಕ ಕೊಡವ ಒಲಗದೊಂದಿಗೆ ದೇವಾಲಯಕ್ಕೆ ತಂದು ಪೂಜೆ ನೆರವೇರಿಸಲಾಯಿತು.
ಮಾಹಾಪೂಜೆಯ ಬಳಿಕ ತೀರ್ಥ ಪ್ರಸಾದ ವಿತರಿಸಲಾಯಿತು.
ದೇವಾಲಯದ ವಾರ್ಷಿಕ ಹಬ್ಬದ ಸಂದರ್ಭ ದೇವಾಲಯಕ್ಕೆ ಒಳಪಟ್ಟ ಕುಟುಂಬಗಳು ಸಾಂಪ್ರಾದಾಯಿಕ ವೇಷ ಭೂಷಣದೊಂದಿಗೆ ದೇವಾಲಯದ ಆವರಣದಲ್ಲಿ ಸೇರಿ ಸಾಂಪ್ರಾದಾಯಿಕ ಬೊಳಕಾಟ್ ನೃತ್ಯ ಸೇವೆ ಸಲ್ಲಿಸಿದರು. ವಿಶೇಷವೆಂದರೆ ಹಬ್ಬದ ಕಟ್ಟಿನ ಮರುದಿನದಿಂದ 11 ದಿನಗಳ ಕಾಲ ಬೆಳಗಿನ ಜಾವದಲ್ಲಿ ದೀಪದ ಬೆಳಕಿನಲ್ಲಿ ದೇವರಿಗೆ ಬೊಳಕಾಟ್ ನೃತ್ಯ ಸೇವೆ ಸಾಂಪ್ರಾದಾಯಿಕ ಉಡುಪಿನಲ್ಲಿ ಸಲ್ಲಿಸುವುದು ವಿಶೇಷವಾಗಿದೆ.
ಈ ಸಂದರ್ಭ ಕೊಡಗರಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಾ.28 ರಂದು ಗ್ರಾಮ ದೇವತೆಗೆ ಪೂಜೆ ಸಲ್ಲಿಸಲಾಯಿತು. ಮಾ.30 ರಂದು ದೇವಾಲಯದ ಆವರಣದಲ್ಲಿ ಹಬ್ಬದ ಕಟ್ಟನ್ನು ಹಾಕಲಾಗಿತ್ತು. ಏ.7 ರಂದು ಶ್ರೀಬಸವೇಶ್ವರ ದೇವರ ಎತ್ತುಪೋರಾಟದೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು.









