ಮಡಿಕೇರಿ ಏ.13 : ಮತದಾನದ ಪ್ರಕ್ರಿಯೆಯಲ್ಲಿ ನಾವು ಪಾಲ್ಗೊಂಡರೆ ಮಾತ್ರ ನಮ್ಮನ್ನು ಆಳುವ ಸೂಕ್ತ ನಾಯಕನ್ನು ಆಯ್ಕೆ ಮಾಡಲು ಸಾಧ್ಯ ಎಂದು ಕುಶಾಲನಗರ ಉಪ ಖಜಾನೆ ಅಧಿಕಾರಿ ಎಲ್.ಎಸ್ ವಿಜಯ ಕುಮಾರ್ ತಿಳಿಸಿದರು.
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಮತದಾರರ ಜಾಗೃತಿ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯಶಾಸ್ತ್ರ ಸಂಘ ಮತ್ತು ಮತದಾರರ ಸಂಘವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ನಾವು ಮತದಾನ ಮಾಡುವಾಗ ನಮ್ಮ ಇಚ್ಚೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿದು ಮತದಾನ ಮಾಡಬೇಕು. 1988 ರಲ್ಲಿ ಸಂವಿಧಾನದ 61 ತಿದ್ದುಪಡಿಯನ್ನು ಮಾಡಿ 18 ವರ್ಷದ ಯುವಜನರಿಗೆ ಮತದಾನ ಮಾಡುವ ಅವಕಾಶ ಕಲ್ಪಿಸಿದೆ. ಭಾರತದ ಸಂವಿಧಾನದ 15 ನೇ ಭಾಗದಲ್ಲಿ 324 ರಿಂದ 329 ವಿಧಿಗಳು ಮತದಾನದ ಕುರಿತು ತಿಳಿಸುತ್ತದೆ. ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನ ಘೋಷಣೆ ಮಾಡುವ ಮೂಲಕ ಮತದಾನ ಮಹತ್ವದ ಬಗ್ಗೆ ತಿಳಿಸಲಾಗಿದೆ. ಯುವಜನರು ಮತದಾನದಲ್ಲಿ ಭಾಗವಹಿಸುವುದಲ್ಲದೆ ಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಕುಶಾಲನಗರ ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಎಚ್.ಕೆ.ಶಾಂತಿ ಮಾತನಾಡಿ ಸಂವಿಧಾನದಲ್ಲಿ ಮಹಿಳೆಯರಿಗೆ ಹೆಚ್ಚು ಗೌರವ ದೊರೆತಿದೆ. ಉತ್ತಮ ಸರ್ಕಾರ ಮತ್ತು ಉತ್ತಮ ನಾಯಕ ನಮಗೆ ಬೇಕಾದರೆ ನಾವೆಲ್ಲರೂ ಮತದಾನದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಪ್ರೊ.ಪ್ರವೀಣ್ ಕುಮಾರ್, ವಿದ್ಯಾರ್ಥಿಗಳಿಗೆ ಪ್ರಥಮ ಭಾರಿ ಮತದಾನಲ್ಲಿ ಭಾಗವಹಿಸಲು ಅವಕಾಶ ದೊರೆತ್ತಿದೆ ಅದು ಒಂದು ಹಬ್ಬದ ರೀತಿ ಅದನ್ನು ಸಂಭ್ರಮಿಸಬೇಕು ಎಂದರು.
ಚುನಾವಣಾ ಕಾರ್ಯವನ್ನು ಬಹುತೇಕ ಶಿಕ್ಷಕರ ವರ್ಗ ನಿಭಾಯಿಸುತ್ತಾರೆ ಅದ್ದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಗುರುಗಳು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡದೆ ಸಮಾನವಾಗಿ ಕಾಣುವಂತೆ ಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ಸಮಾನವಾಗಿ ಕಾಣುತ್ತಾರೆ. ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿ ಚುನಾವಣೆ ಇದೆ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವನಿತ್ ಕುಮಾರ್ ಎಂ.ಎನ್ ಪ್ರಾಸ್ತಾವಿಕ ಮಾತನಾಡಿ ಭಾರತ ಜಗತ್ತಿನ ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಅಧುನಿಕ ರಾಷ್ಟ್ರಗಳು ಭಾರತದ ಪ್ರಜಾಪ್ರಭುತ್ವವನ್ನು ಅನುಸರಿಸುತ್ತೆವೆ. ಪ್ರಜಾಪ್ರಭುತ್ವ ಮೂಲ ವ್ಯಕ್ತಿಗಳೇ. ಪ್ರಜೆಗಳು ಮತದಾನ ಮಾಡುವ ಮೂಲಕ ಇನ್ನಷ್ಟು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಶಾಲನಗರ ತಾಲ್ಲೂಕು ಕಚೇರಿ ಲೆಕ್ಕಧಿಕಾರಿ ರವಿ, ಉಪನ್ಯಾಸಕರಾದ ಜಯಂತಿ, ಹರ್ಷ, ಸುಧಾಕರ್, ಮಂಜು, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.
ತೃತೀಯ ಬಿ.ಎ ವಿಧ್ಯಾರ್ಥಿಗಳಾದ ಸಿಂಚನ ನಿರೂಪಿಸಿ, ತೇಜಸ್ವಿನಿ ಪ್ರಾರ್ಥಸಿದರು. ಉಪನ್ಯಾಸಕರಾದ ಜಯಲಕ್ಷ್ಮಿ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞೆ ಭೋಧಿಸಿದರು. ಉಪನ್ಯಾಸಕ ವನಿತ್ ಕುಮಾರ್ ಸ್ವಾಗತಿಸಿದರೆ, ಮಂಜು ಎಚ್.ಎಂ ವಂದಿಸಿದರು.