ಮಡಿಕೇರಿ ಏ.13 : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಲಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಾಗಿದೆ.
ಚುನಾವಣಾಧಿಕಾರಿಗಳ ಕಚೇರಿ ಆವರಣದ ವ್ಯಾಪ್ತಿಯ 100 ಮೀಟರ್ ಪ್ರದೇಶದಲ್ಲಿ ಸಾರ್ವಜನಿಕ ವಾಹನ ನಿಲುಗಡೆ, ಪ್ರವೇಶ ಮತ್ತು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಪಡಿಸಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು ಸಿಆರ್‍ಪಿಸಿ 1973 ರ ಕಲಂ 144 ರೀತ್ಯಾ ಪ್ರತಿಬಂಧಕಾಜ್ಞೆ ಹೊರಡಿಸಲು ಆರಕ್ಷಕ ವೃತ್ತ ನಿರೀಕ್ಷಕರು, ವಿರಾಜಪೇಟೆ ವೃತ್ತ ಅವರು ಕೋರಿದ್ದು, ಆ ನಿಟ್ಟಿನಲ್ಲಿ ಏಪ್ರಿಲ್ 20 ರವರೆಗೆ ನಾಮಪತ್ರಗಳ ಸ್ವೀಕೃತಿ, ಏಪ್ರಿಲ್, 21 ರಂದು ನಾಮಪತ್ರಗಳ ಪರಿಶೀಲನೆ ಮತ್ತು ಏಪ್ರಿಲ್, 24 ರವರೆಗೆ ನಾಮಪತ್ರಗಳ ವಾಪಾಸ್ಸಾತಿಗೆ ಚುನಾವಣಾ ವೇಳಾಪಟ್ಟಿ ಇದೆ.
ಈ ಅವಧಿಯಲ್ಲಿ 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಯಾದ ವಿರಾಜಪೇಟೆ ತಾಲ್ಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಯಾಗುವ ಸಂಭವ ಇರುತ್ತದೆ. ಎಲ್ಲಾ ರಾಜಕೀಯ ಪಕ್ಷದ ನಾಯಕರು ಮತ್ತು ಅವರ ಬೆಂಬಲಿಗರು ಒಂದೇ ಕಡೆ ಸೇರುವುದರಿಂದ ಸಾರ್ವಜನಿಕರ ನೆಮ್ಮದಿ ಮತ್ತು ಶಾಂತಿಗೆ ಭಂಗ ಉಂಟಾಗುವಂತಹ ಸಾಧ್ಯತೆಗಳಾಗಬಹುದು ಎಂಬುವುದು ಮನದಟ್ಟಾಗಿರುವುದರಿಂದ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರೀತ್ಯಾ ದತ್ತವಾಗಿರುವ ಅಧಿಕಾರದಂತೆ ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ಅವರು ಪ್ರತಿಬಂಧಕಾಜ್ಞೆಯನ್ನು ವಿಧಿಸಿದ್ದಾರೆ.
ಚುನಾವಣಾಧಿಕಾರಿಗಳ ಕಚೇರಿಯಾದ ತಾಲ್ಲೂಕು ಕಚೇರಿ, ವಿರಾಜಪೇಟೆ ಆವರಣದ ವ್ಯಾಪ್ತಿಯ 100 ಮೀಟರ್ ಪ್ರದೇಶದಲ್ಲಿ ಸಾರ್ವಜನಿಕ ವಾಹನ ನಿಲುಗಡೆ ಪ್ರವೇಶ ಮತ್ತು ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿದೆ. ಹಾಗೂ 5 ಜನರಿಗಿಂತ ಮೇಲ್ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಸೇರುವುದು ಮತ್ತು ಲಿಖಿತ ಪೂರ್ವಾನುಮತಿ ಪಡೆಯದೆ ಯಾವುದೇ ಮೆರವಣಿಗೆ, ಸಭೆ, ಸಮಾರಂಭ ನಡೆಸುವುದು, ಜನರು ಯಾವುದೇ ಹಾನಿಕಾರಕ ಶಸ್ತ್ರಾಸ್ತ್ರಗಳು ಅಂದರೆ ಖಡ್ಗ, ಭಲ್ಲೆ, ಕೋವಿ, ಚಾಕು, ಚೂರಿ, ಲಾಠಿ, ಪಿಸ್ತೂಲು ಮತ್ತಿತರ ಹೊಂದಿ ತಿರುಗಾಡುವುದನ್ನು. ಸ್ಪೋಟಕ ಅಥವಾ ಬೆಂಕಿ ಹೊತ್ತಿಕೊಳ್ಳುವಂತಹ ವಸ್ತುಗಳನ್ನು ಹೊಂದಿ ತಿರುಗಾಡುವುದನ್ನು, ಪ್ರತಿಕೃತಿ, ಪ್ಲೆಕ್ಸ್, ಬ್ಯಾನರ್ ಮತ್ತಿತರ ಹೊತ್ತು ತಿರುಗಾಡುವುದನ್ನು, ಸಾರ್ವಜನಿಕ ನೈತಿಕತೆಗೆ ಭಂಗ ತರುವಂತಹ ಅಥವಾ ಅಶಾಂತಿಗೆ ಪ್ರೇರೇಪಿಸುವಂತೆ ಕಿರುಚುವುದು, ಆಡುವುದು, ವಾದ್ಯಗಳನ್ನು ಬಾರಿಸುವುದು, ಸಂಜ್ಞೆಗಳನ್ನು ನೀಡುವುದು, ಚಿಹ್ನೆಗಳನ್ನು ತೋರಿಸುವುದು ಮತ್ತಿತರ ನಿಷೇಧಿಸಲಾಗಿದೆ.
ಯಾರಾದರೂ ಈ ಅಂಶಗಳನ್ನು ಉಲ್ಲಂಘಿಸಿ ಅಂತಹ ವಸ್ತುಗಳನ್ನು ಹೊಂದಿದ್ದಲ್ಲಿ ಆರಕ್ಷಕ ಸಿಬ್ಬಂದಿಯು ಅವರನ್ನು ನಿಶಸ್ತ್ರಗೊಳಿಸಿ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ಅವರು ತಿಳಿಸಿದ್ದಾರೆ.









