ಮಡಿಕೇರಿ ಏ.14 : ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲ್ಲೂಕಿನ ಸಂಪಾಜೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮಂಡ್ಯದ ಕುಮಾರ(35), ಪತ್ನಿ ಶಿಲ್ಪಾ (29), ಪ್ರಿಯಾಂಕ, ಮಿಶಿಕಾ (8 ತಿಂಗಳು), ಯಶಸ್ ಗೌಡ (8) ಹಾಗೂ ಮನುಶ್ರೀ (3) ಮೃತ ದುರ್ದೈವಿಗಳು.
ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಪ್ರ‍್ರಿಯಾಂಕ ಅವರ ಪತಿ ಮಂಜುನಾಥ್ ಅವರನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಗಾಯಾಳು ಬಿಯಾನ್ ಗೌಡ(6)ನನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಮಧ್ಯಾಹ್ನದ ವೇಳೆ ಮಂಡ್ಯದ ಕುಮಾರ್ ಹಾಗೂ ಮಂಜುನಾಥ್ ಕುಟುಂಬದ ಒಟ್ಟು ಎಂಟು ಮಂದಿ ಕಾರಿನಲ್ಲಿ ಮಡಿಕೇರಿಯಿಂದ ಸುಳ್ಯದತ್ತ ಸಾಗುತ್ತಿದ್ದರು. ಇದೇ ಸಂದರ್ಭ ಸುಳ್ಯದ ಕಡೆಯಿಂದ ಮಡಿಕೇರಿಯತ್ತ ಬರುತ್ತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರಿನ ನಡುವೆ ಸಂಪಾಜೆಯ ಪೆಟ್ರೋಲ್ ಬಂಕ್ ಬಳಿ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದವರನ್ನು ತಕ್ಷಣ ಸುಳ್ಯ ಆಸ್ಪತ್ರೆಗೆ ಸಾಗಿಸಲಾಯಿತಾದರು, ಅಷ್ಟರಲ್ಲೆ ಆರು ಮಂದಿ ಮೃತಪಟ್ಟಿದ್ದರು. ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗ ಜಖಂಗೊoಡಿದೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.