ಮಡಿಕೇರಿ ಏ.19 : ನಗರದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನವೀಕೃತಗೊಂಡಿರುವ ಶ್ರೀ ಕೋದಂಡ ರಾಮ ದೇವಾಲಯದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಮೇ 2 ರಿಂದ 4ರ ವರೆಗೆ ಜರುಗಲಿದೆ ಎಂದು ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜಿ.ರಾಜೇಂದ್ರ ಅವರು ತಿಳಿಸಿದ್ದಾರೆ.
ದೇವಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಶ್ರೀ ರಾಮ, ಸೀತೆ, ಲಕ್ಷ್ಣಣ ಮತ್ತು ಆಂಜನೇಯರನ್ನು ಒಳಗೊಂಡಂಡತೆ ಜಿಲ್ಲೆಯಲ್ಲಿರುವ ಏಕೈಕ ದೇವಾಲಯ ಶ್ರೀ ಕೋದಂಡ ರಾಮ ದೇವಾಲಯವೆಂದು ತಿಳಿಸಿ, ಈ ದೇವಾಲಯ ಜಾತಿ ಮತ ಧರ್ಮಗಳನ್ನು ಮೀರಿ ಮುನ್ನಡೆಯುತ್ತಿರುವ ಧಾರ್ಮಿಕ ಕೇಂದ್ರವೆಂದು ಹೆಮ್ಮೆಯಿಂದ ನುಡಿದರು.
ಈ ದೇವಾಲಯದ ನಿರ್ಮಾಣ ಕೆತ್ತನೆ ಕೆಲಸಗಳನ್ನು ಪಾಂಡಿಚೇರಿಯ ಲೋಗಾನಂದ, ಉಪ್ಪಿನಂಗಡಿಯ ವಿಜಯ್ ಹಾಗೂ ಅನೀಶ್ ಹಾಗೂ ಇನ್ನಿತರರು ಅತ್ಯಂತ ಅಚ್ಚುಕಟ್ಟಾಗಿ ಸುಂದರವಾಗಿ ನಿರ್ವಹಿಸಿದ್ದಾರೆ. ದೇವಾಲಯದ ಒಳಾಂಗಣದಲ್ಲಿ ಶಬರಿಮಲೈನಲ್ಲಿ ಕನ್ನಿಮೂಲ ದಿಕ್ಕಿನಲ್ಲಿ ನೆಲೆ ನಿಂತಿರುವ ಮಹಾಗಣಪತಿಯಂತೆ ಕನ್ನಿಮೂಲ ದಿಕ್ಕಿನಲ್ಲಿ ಶ್ರೀ ಬಲಮುರಿ (ಬಲಗಡೆ ಸೊಂಡಿಲು) ಕ್ಷಿಪ್ರಪ್ರಸಾದ ಮಹಾಗಣಪತಿಯ ಗುಡಿಯೂ ನಿರ್ಮಾಣಮಾಡಲಾಗಿದೆ. ಅಲ್ಲದೆ, ನವಗ್ರಹಗಳ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗುತ್ತಿದೆ ಎಂದರು.
ದೇವಾಲಯದಲ್ಲಿ ವಿಷ್ಣುವಿನ ದಶಾವತಾರಗಳು, ಮೇಲ್ಛಾವಣಿಯಲ್ಲಿ ಅತ್ಯಂತ ಅಪರೂಪದ ರಾಶಿಕಮಲ ವಿನ್ಯಾಸವನ್ನು ರೂಪಿಸಲಾಗಿದೆ. ದೇವಸ್ಥಾನದ ಹೊರ ಆವರಣದಲ್ಲಿ, ಬ್ರಹ್ಮ , ಸರಸ್ವತಿ, ದತ್ತಾತ್ರೇಯ, ಅಶ್ವಿನಿ ದೇವತೆಗಳು, ಶ್ರೀರಾಮನ ಪಟ್ಟಾಭಿಷೇಕ ಸೇರಿದಂತೆ ವಿವಿಧ ದೇವರುಗಳ ಕಲಾಕೃತಿಗಳನ್ನು ರಚಿಸಲಾಗಿದೆಯೆಂದು ಮಾಹಿತಿ ನೀಡಿದರು.
ದೇವಾಲಯವನ್ನು ಪುನರ್ ನಿರ್ಮಿಸುವ ನಿಟ್ಟಿನಲ್ಲಿ ಕೋದಂಡ ರಾಮ ದೇವಾಲಯ ಟ್ರಸ್ಟ್ ರಚಿಸಿಕೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಟ್ರಸ್ಟ್ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆಯೆಂದು ತಿಳಿಸಿದರು.
::: ಪ್ರತಿಷ್ಠಾಪನಾ ಮಹೋತ್ಸವ :::
ವೇದಬ್ರಹ್ಮ ಶ್ರೀಕೃಷ್ಣ ಉಪಾಧ್ಯ, ವಿದ್ವಾನ್ ಕೆ.ಶ್ರೀನಿವಾಸ ಉಪಾಧ್ಯ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು ಜರುಗಲಿದೆ. ಮೇ2 ರಂದು ಸಂಜೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಗೊಂಡು ಹೋಮ-ಹವನಾದಿಗಳು ಮೇ 3ರ ವರೆಗೆ ಜರುಗಲಿದೆ ಎಂದರು.
ಮೇ 3 ರಂದು ಬೆಳಿಗ್ಗೆ 9 ಗಂಟೆಗೆ ಪ್ರಧಾನ ಕಲಶ ಸಹಿತ ಉತ್ಸವ ಮೂರ್ತಿ ಹೊತ್ತ ಮಂಟಪದೊಂದಿಗೆ ಧಾರ್ಮಿಕ ಮೆರವಣಿಗೆಯು ಗಾಂಧಿ ಮೈದಾನದಿಂದ ಹೊರಡಲಿದ್ದು, ವಿವಿಧ ಕಲಾ ತಂಡಗಳು, ಚಂಡೆ ವಾದ್ಯ, ಭಜನಾ ತಂಡಗಳ, ಕಲಶ ಹೊತ್ತ ಮಹಿಳೆಯರ ಸಹಿತ ಮೆರವಣಿಗೆಯು ತೆರಳಿ ಬಳಿಕ ದೇವಾಲಯ ಆವರಣ ತಲುಪುತ್ತದೆ.
ಸಂಜೆ 4.30 ರಿಂದ ವೇದ ಪಾರಾಯಣ, ದೇವರ ಬಿಂಬ ಶಯ್ಯಾಧಿವಾಸ ಪ್ರಕ್ರಿಯೆಗಳು, ಅಧಿವಾಸ ಹೋಮ ಸೇರಿದಂತೆ 108 ಕಲಶ ಸಹಿತ ಬ್ರಹ್ಮ ಕಲಶಾಧಿವಾಸ, ಅಷ್ಟಬಂಧಾದಿವಾಸ, ಮಹಾಪೂಜೆ ಜರುಗಲಿದೆ.
ಸಂಜೆ 5 ಗಂಟೆಯಿಂದ ದೇವಾಲಯ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಕುಶಾಲನಗರ ಎಸ್.ಎಲ್.ಎನ್ ಗ್ರೂಪ್ ನ ಸಾತಪ್ಪನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಕೋದಂಡರಾಮ ದೇವಾಲಯದ ಅಧ್ಯಕ್ಷ ಹೆಚ್.ಮಂಜುನಾಥ್ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿ ಗೌರವಿಸಲಾಗುವುದು. ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮೇ4 ರಂದು ಬೆಳಗ್ಗೆ 6 ಗಂಟೆಯಿಂದ ದೇವಾಲಯ ಆವರಣದಲ್ಲಿ ವಿವಿಧ ಹೋಮ ಹವನಾದಿ ವಿಧಿ ವಿಧಾನಗಳು ಬೆಳಿಗ್ಗೆ 6 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಬೆಳಿಗ್ಗೆ 7.45ಕ್ಕೆ ಶ್ರೀ ದೇವರ ಪ್ರತಿಷ್ಠಾಪನೆ ಜರುಗಲಿದೆ. ಬೆಳಿಗ್ಗೆ 10.5 ಕ್ಕೆ ಬ್ರಹ್ಮ ಕುಂಭಾಭಿಷೇಕ ನೆರವೇರಲಿದೆ.
ಸಂಜೆ 5 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಪುತ್ತೂರಿನ ಜೋತಿಷ್ಯರಾದ ಈ.ಗೋಪಾಲಕೃಷ್ಣ ಉದ್ಘಾಟಿಸಲಿದ್ದು, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಬೆಂಗಳೂರಿನ ಅಲಸೂರು ಶ್ರೀ ರಾಮ ಕೃಷ್ಣ ಮಠದ ಶ್ರೀ ಬೋಧ ಸ್ವರೂಪಾನಂದ ಮಹಾರಾಜ್ ಆಶೀರ್ವಚನ ನೀಡಲಿದ್ದಾರೆ. ಅಲ್ಲದೆ ಮೇ 2 ರಿಂದ 4ರ ವರೆಗೆ ವಿಶಾಲಾಕ್ಷಿ ಸುಕುಮಾರ್ ನೇತೃತ್ವದಲ್ಲಿ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಶ್ರೀ ಕೋದಂಡ ರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ್ ಹೆಚ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 40 ವರ್ಷಗಳ ಹಿಂದೆ ಸಣ್ಣ ದೇವಾಲಯವೊಂದನ್ನು ನಿರ್ಮಿಸಿ ಕೆಳಭಾಗದಲ್ಲಿ ಕೋದಂಡರಾಮನನ್ನು ಪ್ರತಿಷ್ಠಾಪನೆಗೊಳಿಸಲಾಗಿತ್ತು. ಇದೀಗ ಜೀರ್ಣೋದ್ಧಾರದ ಮೂಲಕ ಮೇಲ್ಭಾಗಕ್ಕೆ ತರಲಾಗಿದೆ. ದೇವಾಲಯದ ಕೆಳಭಾಗದಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸಂಪತ್ ಕುಮಾರ್ ಎಸ್.ಎಸ್., ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಸುಬ್ಬರಾವ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುಧಾಕರ್ ಹೆಚ್.ವಿ., ಖಜಾಂಚಿ ತಿಮ್ಮಯ್ಯ ಹೆಚ್.ಎನ್., ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಂಜುಂಡ ಹೆಚ್.ಎನ್., ಖಜಾಂಚಿ ಕುಶಾಲ್ ಎಸ್. ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ವಿನೋದ್ ಕುಮಾರ್ ಉಪಸ್ಥಿತರಿದ್ದರು.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*