ಮಡಿಕೇರಿ ಏ.19 : ಆದಿ ದ್ರಾವಿಡ ಸಮುದಾಯದ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಕ್ಷೇತ್ರದ ಜನತೆಯ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲು ಭಾರತ ಕಮ್ಯೂನಿಸ್ಟ್ ಪಕ್ಷದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿರುವ ಹೆಚ್.ಎಂ.ಸೋಮಪ್ಪ ಅವರಿಗೆ ಜನತೆ ಅವಕಾಶವನ್ನು ನೀಡಬೇಕೆಂದು ದಕ್ಷಿಣ ಕನ್ನಡದ ಮಂಗಳೂರಿನ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾ ವಕ್ತಾರ ರಾಮ್ ಕುಮಾರ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿ ದ್ರಾವಿಡ ಸಮುದಾಯಕ್ಕೆ ಸೇರಿರುವ ಹೆಚ್.ಎಂ. ಸೋಮಪ್ಪ ಅವರಿಗೆ ಚುನಾವಣಾ ಸ್ಪರ್ಧೆಗೆ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿರುವ ಆದಿ ದ್ರಾವಿಡ ಸಮುದಾಯ ಮೂಲತಃ ದಕ್ಷಿಣ ಕನ್ನಡ ಭಾಗದಿಂದ ವಿವಿಧ ಕೆಲಸ ಕಾರ್ಯಗಳಿಗೆ ಬಂದು ಜಿಲ್ಲೆಯಲ್ಲಿ ನೆಲೆಸಿದವರಾಗಿದ್ದಾರೆ. ಕಳೆದ ಐದು ದಶಕಗಳಿಂದ ಈ ಸಮುದಾಯದ ಮಂದಿ ಹತ್ತು ಹಲ ಸಮಸ್ಯೆಗಳನ್ನು ಎದುರಿಸುತ್ತಾ ಬರುತ್ತಿದ್ದು, ಸೋಮಪ್ಪ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆದಿ ದ್ರಾವಿಡ ಸಮುದಾಯದ ಸಂಕಷ್ಟಗಳಿಗೆ ಧ್ವನಿಯಾಗಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿರುವ ಆದಿ ದ್ರಾವಿಡ ಸಮುದಾಯದವರು ಪ್ರಮುಖವಾಗಿ ‘ಜಾತಿ ಪ್ರಮಾಣ ಪತ್ರ’ದ ಗೊಂದಲಗಳಿಂದ ನಲುಗುತ್ತಿದ್ದಾರೆ. ಆದಿ ದ್ರಾವಿಡ ಸಮುದಾಯ ಪರಿಶಿಷ್ಟ ಜಾತಿಯ ಕ್ರಮ ಸಂಖ್ಯೆ 2 ಕ್ಕೆ ಬರುತ್ತಾರೆ. ಕೊಡಗಿನಲ್ಲಿ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ ಸಮುದಾಯದ ಮಂದಿಗೆ ‘ಆದಿ ದ್ರಾವಿಡ’ ಎನ್ನುವುದಕ್ಕೆ ಬದಲಾಗಿ ವಿವಿಧ ಹೆಸರುಗಳ ಜಾತಿ ಪ್ರಮಾಣ ಪತ್ರವನ್ನು ಅಧಿಕಾರಿಗಳು ಅಗತ್ಯ ಪರಿಶೀಲನೆ ನಡೆಸದೆ, ಮಾಹಿತಿಯರಿಯದೆ ನಿಡುತ್ತಿದ್ದಾರೆ. ಇದರಿಂದ ಈ ಸಮುದಾಯದ ಮಂದಿ ಸರ್ಕಾರದಿಂದ ನ್ಯಾಯಯುತವಾಗಿ ದೊರಕಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದರು,
ಕೊಡಗಿನ ಆದಿ ದ್ರಾವಿಡ ಸಮುದಾಯದ ಜಾತಿ ಪ್ರಮಾಣ ಪತ್ರ ಸಮಸ್ಯೆಯನ್ನು ಸರಿಪಡಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಪತ್ರಗಳನ್ನು ಸಲ್ಲಿಸಲಾಗಿದ್ದರು ಸಮಸ್ಯೆ ಬಗೆಹರಿದಿಲ್ಲ. ಈ ಹಿನ್ನೆಲೆ ಹೆಚ್.ಸೋಮಪ್ಪ ಅವರು ಈ ಕ್ಷೇತ್ರದಿಂದ ಆರಿಸಿ ಬರುವ ಮೂಲಕ ಸಮುದಾಯದ ಸಂಕಷ್ಟಗಳ ಬಗೆಹರಿಕೆಗೆ ನೆರವಾಗಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮಂಗಳೂರು ಜಿಲ್ಲಾಧ್ಯಕ್ಷರಾದ ರಘುನಾಥ ಅತ್ತಾವರ, ಪ್ರಧಾನ ಕಾರ್ಯದರ್ಶಿ ಆನಂದ ಅತ್ತಾವರ, ಮಂಗಳೂರು ಚೈತನ್ಯ ಸಹಕಾರ ಸಂಘದ ಅಧ್ಯಕ್ಷರಾದ ಕೃಷ್ಣ ಸೂಟರ್ ಪೇಟೆ. ಮಂಗಳೂರು ಆರಾಧನಾ ಸಮಿತಿ ಅಧ್ಯಕ್ಷ ಜಯೇಂದ್ರ ಕೋಟ್ಯಾನ್, ಬಂಟ್ವಾಳ ತಾಲ್ಲೂಕು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಪಿ.ವಿ. ಜಯಪ್ರಕಾಶ್ ಉಪಸ್ಥಿತರಿದ್ದರು.









