ಮಡಿಕೇರಿ ಏ.20 : ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಮತ್ತು ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿರುವ ಶ್ರೀ ಕೃಷ್ಣ ಗೋಶಾಲೆಯ ಸಂಸ್ಥಾಪಕ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು.
ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಹರೀಶ್ ಜಿ.ಆಚಾರ್ಯ ಅವರು ಕ್ಷೇತ್ರದ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರಿಗೆ ನಾಮಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಅವರು 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಿಲುಕಿ ಅನಾಥವಾಗಿ ಅಲೆದಾಡುತ್ತಿದ್ದ ಗೋವುಗಳಿಗೆ ಆಶ್ರಯ ನೀಡುವ ಸಲುವಾಗಿ ಶ್ರೀಕೃಷ್ಣ ಗೋಶಾಲೆಯನ್ನು ಸ್ಥಾಪಿಸಿದ್ದೇನೆ. ಆ ಮೂಲಕ ನೈಜ ಗೋಪ್ರೀತಿಯನ್ನು ತೋರಿಸಿದ್ದೇನೆ ಮತ್ತು ಗೋರಕ್ಷಣೆಗೆ ಆದ್ಯತೆ ನೀಡಿದ್ದೇನೆ. ಸಿನಿಮಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದು, ನನ್ನ ಬಹುತೇಕ ಸಮಯವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದೇನೆ. ಜನ ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ.