ಮಡಿಕೇರಿ ಏ.21 : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕೊಡಗು ಜಿಲ್ಲೆ ಶೇ.90.55 ಫಲಿತಾಂಶದೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
ಈ ಬಾರಿಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಶನಿವಾರಸಂತೆಯ ವಿಘ್ನೇಶ್ವರ ಪದವಿ ಪೂರ್ವ ಕಾಲೇಜಿನ ಅಕ್ಷತಾ ಎಲ್. ಅವರು 578 ಅಂಕ, ವಾಣಿಜ್ಯ ವಿಭಾಗದಲ್ಲಿ ಮಡಿಕೇರಿಯ ಸಂತ ಮೈಕೆಲರ ಪಿಯು ಕಾಲೇಜಿನ ರೊಲೆನ್ಸಿಯಾ ಬಿಯಾನ್ ರಾಯ್ 593 ಹಾಗೂ ವಿಜ್ಞಾನ ವಿಭಾಗದಲ್ಲಿ ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನ ಬ್ರಿಜೇಶ್ ನಿರಂಜನ್ ಕೆ. ಅವರು 591 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
::: 4185 ಮಂದಿ ತೇರ್ಗಡೆ :::
ಕೊಡಗು ಜಿಲ್ಲೆಯಲ್ಲಿ ಈ ಬಾರಿಯ ಪಿಯುಸಿ ಪರೀಕ್ಷೆಗೆ ಹಾಜರಾದ 4622 ವಿದ್ಯಾರ್ಥಿಗಳಲ್ಲಿ 4185 ಮಂದಿ ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 985 ವಿದ್ಯಾರ್ಥಿಗಳಲ್ಲಿ 779 ಮಂದಿ ಉತ್ತೀರ್ಣರಾಗಿ ಶೇ.79.09 ಫಲಿತಾಂಶ ಬಂದಿದ್ದರೆ, ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡ 2347 ವಿದ್ಯಾರ್ಥಿಗಳಲ್ಲಿ 2168 ಮಂದಿ ತೇರ್ಗಡೆಯಾಗುವ ಮೂಲಕ ಶೇ.92.37 ಫಲಿತಾಂಶ, ವಿಜ್ಞಾನ ವಿಭಾಗದಲ್ಲಿ 1290 ವಿದ್ಯಾರ್ಥಿಗಳಲ್ಲಿ 1238 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.95.97 ಫಲಿತಾಂಶ ಲಭ್ಯವಾಗಿದೆ.
::: ಬಾಲಕಿಯರ ಮೇಲುಗೈ :::
ಜಿಲ್ಲಾ ವ್ಯಾಪ್ತಿಯಲ್ಲಿ ಪಿಯುಸಿ ಪರೀಕ್ಷೆ ಬರೆದ 2741 ಬಾಲಕಿಯರಲ್ಲಿ 2466 ಮಂದಿ ಉತ್ತೀರ್ಣರಾಗಿ ಶೇ.89.97 ಫಲಿತಾಂಶ ಪಡೆದಿದ್ದರೆ, ಪರೀಕ್ಷೆ ಬರೆದ 2599 ಬಾಲಕರಲ್ಲಿ 2143 ಮಂದಿ ತೇರ್ಗಡೆಯಾಗಿದ್ದು, ಶೇ.82.45 ಫಲಿತಾಂಶ ಪಡೆದಿದ್ದಾರೆ. ಇದರೊಂದಿಗೆ ಈ ಬಾರಿಯೂ ಬಾಲಕಿಯರು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ.
ಜಿಲ್ಲೆಯ ಪಟ್ಟಣ ಪ್ರದೇಶದ 2447 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸಿದ್ದು, ಇವರಲ್ಲಿ 2261 ಮಂದಿ ಉತ್ತೀರ್ಣರಾಗಿ ಶೇ.92.40 ಫಲಿತಾಂಶ ಬಂದಿದ್ದರೆ, ಗ್ರಾಮೀಣ ಭಾಗದ 2175 ವಿದ್ಯಾರ್ಥಿಗಳಲ್ಲಿ 1924 ಮಂದಿ ಉತ್ತೀರ್ಣರಾಗಿ ಶೇ.88.46 ಫಲಿತಾಂಶ ದೊರಕಿದೆ.
ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ 3293 ಮಂದಿಯಲ್ಲಿ 2983 ಮಂದಿ ಉತ್ತೀರ್ಣರಾಗಿ ಶೇ.90.59 ಫಲಿತಾಂಶ ಬಂದಿದ್ದರೆ, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಿದ 2047 ವಿದ್ಯಾರ್ಥಿಗಳಲ್ಲಿ 1626 ಮಂದಿ ತೇರ್ಗಡೆಯಾಗಿ ಶೇ.79.43 ಫಲಿತಾಂಶ ಪಡೆದಿದ್ದಾರೆ.









