ಚಾಮರಾಜನಗರ ಏ.23 : ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭ ಚಾಮರಾಜನಗರದ ಕುಂದಕೆರೆ ಗ್ರಾಮದ ಹೊರ ವಲಯದಲ್ಲಿ ಸಿಡಿಲು ಬಡಿದು 8 ಹಸುಗಳು, 2 ಕುರಿಗಳು ಮತ್ತು 1 ಮೇಕೆ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಗ್ರಾಮದ ರೈತ ಸಣ್ಣಮಲ್ಲಪ್ಪನ ರಾಜಪ್ಪ ಜಾನುವಾರು ಕಳೆದುಕೊಂಡವರಾಗಿದ್ದು, ಜಮೀನಿನಲ್ಲಿ ಈ ದುರಂತ ಸಂಭವಿಸಿದೆ. ಭಾರೀ ಮಳೆ ಸುರಿಯುತ್ತಿದ್ದಾಗ ಜಾನುವಾರುಗಳು ಆಲದ ಮರದ ಕೆಳಗೆ ಆಶ್ರಯ ಪಡೆದಿದ್ದವು. ಈ ಸಂದರ್ಭ ಸಿಡಿಲು ಬಡಿದು ನಾಡತಳಿಯ 8 ಹಸುಗಳು, 2 ಕುರಿಗಳು, 1 ಮೇಕೆ ಸಾವನ್ನಪ್ಪಿದೆ. ಘಟನೆ ವೇಳೆ ರಾಜಪ್ಪ ಮತ್ತೊಂದು ಬದಿಯಲ್ಲಿ ನಿಂತಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದ ಇನ್ನೊಂದು ಪ್ರದೇಶದಲ್ಲಿ ಬಸವಣ್ಣ ಎಂಬುವರ ಹಸು ಸಿಡಿಲು ಬಡಿದು ಮೃತಪಟ್ಟಿದೆ.








