ಮಡಿಕೇರಿ ಏ.30 : ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಪಕ್ಷ ಸ್ಪರ್ಧೆ ಮಾಡುತ್ತಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಇರುವ ಕಾರಣ ಪಕ್ಷದ ನಿಲುವು ಕುರಿತು ಮಡಿಕೇರಿಯ ಜಿಲ್ಲಾ ಕಚೇರಿಯಲ್ಲಿ ಸಮಾಲೋಚನಾ ಸಭೆ ನಡೆಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಅವರ ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಮತ್ತು ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ನಾಯಕರುಗಳೊಂದಿಗೆ ಚರ್ಚಿಸಲಾಯಿತು.
ಜನಪರ ಹೋರಾಟಗಾರ ಅಮೀನ್ ಮೊಹಿಸಿನ್ ಅವರು ಮಡಿಕೇರಿ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡಲಿದ್ದು, ಕ್ಷೇತ್ರದಲ್ಲಿ ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಜೆಸಿಬಿ ಪಕ್ಷಗಳಾಗಿದ್ದು, ಬೇಸತ್ತಿರುವ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಮಡಿಕೇರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಎಸ್‌ಡಿಪಿಐ ಅಭ್ಯರ್ಥಿ ಅಮೀನ್ ಮೊಹಿಸಿನ್ ಅವರನ್ನು ಬೆಂಬಲಿಸಲಿದ್ದಾರೆ ಎಂದು ಅಫ್ಸರ್ ಕೊಡ್ಲಿಪೇಟೆ ವಿಶ್ವಾಸ ವ್ಯಕ್ತಪಡಿಸಿದರು.
ವಿರಾಜಪೇಟೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಣಕ್ಕೆ ಇಳಿಸದ ಕಾರಣ ಫ್ಯಾಸಿಸ್ಟ್ ಮನೋಭಾವನೆ ಇರುವ ಅಭ್ಯರ್ಥಿಗಳನ್ನು ಸೋಲಿಸುವ ಮತ್ತು ಜನಪರ ಕಾಳಜಿ ಹೊಂದಿರುವ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಕುರಿತು ಸುದೀರ್ಘ ಚರ್ಚೆ ನಡೆದಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ 16 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಹೊರತು ಪಡಿಸಿ ಜಾತ್ಯಾತೀತ ಮನೋಭಾವವುಳ್ಳ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದೇವೆ. ಇದರ ಸಲುವಾಗಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ರಾಜ್ಯ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತಿಳಿಸಲಾಗುವುದೆಂದು ಸ್ಪಷ್ಟಪಡಿಸಿದರು.
ಎಸ್ ಡಿ ಪಿ ಐ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಬಳಿ ಹೋಗಿ ಮತ ಕೇಳುವ ಪಕ್ಷವಲ್ಲ. ವರ್ಷದ 365 ದಿನಗಳು ಕೂಡ ನಮ್ಮ ಕಾರ್ಯಕರ್ತರು ಜನರ ಸಮಸ್ಯೆಯನ್ನು ಬಗೆಹರಿಸಲು ಹೋರಾಟ ಮಾಡುತ್ತಿದ್ದಾರೆ. ಜನರು ಎಸ್ ಡಿಪಿಐ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದು ಪಕ್ಷದ 16 ಶಾಸಕರು ವಿಧಾನಸಭೆ ಪ್ರವೇಶಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ರಾಜ್ಯ ಸಮಿತಿ ಸದಸ್ಯರಾದ ಸಿದ್ದೀಕ್ ಆನೆಮಹಲ್, ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ಚುನಾವಣಾ ಉಸ್ತುವಾರಿ ಬಷೀರ್ ಅಹ್ಮದ್, ಜಿಲ್ಲಾ ಕಾರ್ಯದರ್ಶಿ ಮೇರಿ ವೇಗಸ್, ತೈಸೀರ್, ವಿರಾಜಪೇಟೆ ವಿಧಾನಸಭಾ ಅಧ್ಯಕ್ಷರಾದ ಹನೀಫ್, ಮಡಿಕೇರಿ ವಿಧಾನಸಭಾ ಅಧ್ಯಕ್ಷರಾದ ಉಸ್ಮಾನ್ ಸುಂಟಿಕೊಪ್ಪ , ಅಭ್ಯರ್ಥಿ ಅಮೀನ್ ಮೊಹಿಸಿನ್ , ಮನ್ಸೂರ್, ಸಲಾಂ ಕೂಡಿಗೆ, ಜಲೀಲ್ ಉಪಸ್ಥಿತರಿದ್ದರು.