ಮಡಿಕೇರಿ ಮೇ 3 : ವಿಧಾನಸಭಾ ಚುನಾವಣೆಯಲ್ಲಿ ಪ್ರಜಾ ಪರಿವರ್ತನಾ ವೇದಿಕೆಯ ಕೊಡಗು ಜಿಲ್ಲಾ ಘಟಕ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಲಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್.ಮುತ್ತಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದಿಕೆಯ ರಾಜ್ಯ ಸಮಿತಿಯ ನಿರ್ದೇಶನದಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಮಂಥರ್ ಗೌಡ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದರು.
ವೇದಿಕೆಯ ಎಲ್ಲಾ ಮತದಾರರು, ಕಾರ್ಯಕರ್ತರು, ಸಂಘಟನೆಯ ಅಭಿಮಾನಿಗಳು ಹಾಗೂ ಜಿಲ್ಲೆಯ ಸಮಸ್ತ ಮತದಾರರು ಈ ಬಾರಿಯ ಬದಲಾವಣೆಯ ದೃಷ್ಟಿಯಿಂದ ತಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷದ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ನೀಡಿ ಜಯಶೀಲರನ್ನಾಗಿ ಮಾಡಿ ಜನ ಸೇವೆಗೆ ಅವಕಾಶವನ್ನು ಮಾಡಿಕೊಡಬೇಕಾಗಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎ.ಗಣೇಶ್, ಸಂಘಟನಾ ಕಾರ್ಯದರ್ಶಿ ಹೊನ್ನಪ್ಪ, ಜಿಲ್ಲಾ ಖಜಾಂಚಿ ಜಿ.ರಾಮ, ಮುಖಂಡರಾದ ಸುನೀಲ್ ಉಪಸ್ಥಿತರಿದ್ದರು.










